sportsಪ್ರಮುಖ ಸುದ್ದಿಗಳು

CWG Glasgow 2026 : ಗ್ಲಾಸ್ಗೋ ಕಾಮನ್‌ವೆಲ್ತ್‌ನಲ್ಲಿ ಬಾಕ್ಸರ್‌ಗಳ ಭರ್ಜರಿ ಪಂಚ್ : ಭಾರತಕ್ಕೆ ಒಂದೇ ದಿನ 16 ಪದಕ

ಬಾಕ್ಸಿಂಗ್‌ನ ಒಟ್ಟು 14 ವಿಭಾಗಗಳ ಪೈಕಿ 10ರಲ್ಲಿ ಭಾರತೀಯರು ಪದಕದ ಸಾಧನೆ ಮಾಡುವ ಮೂಲಕ ಅಪ್ರತಿಮ ಪ್ರಾಬಲ್ಯ ಸ್ಥಾಪಿಸಿದ್ದಾರೆ.

By ರಶ್ಮಿ ಎಸ್. | Rashmi S

1 min read

WhatsAppPost
cwg glasgow 2026 Indian boxers win 16 medals
cwg glasgow 2026 Indian boxers win 16 medals

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಹತ್ತನೇ ದಿನ ಭಾರತೀಯ ಅಥ್ಲೀಟ್‌ಗಳು ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ವಿಶೇಷವಾಗಿ ಬಾಕ್ಸಿಂಗ್ ಅಖಾಡದಲ್ಲಿ ಎದುರಾಳಿಗಳಿಗೆ ಸಿಡಿಲಮರಿ ಪಂಚ್ ನೀಡಿದ ಭಾರತೀಯ ಮುಷ್ಟಿ ಯುದ್ಧದ ವೀರರು, ಶನಿವಾರ ಒಂದೇ ದಿನ ಬರೋಬ್ಬರಿ 7 ಚಿನ್ನದ ಪದಕಗಳನ್ನು ದೇಶದ ಮುಡಿಗೆ ತೇಗಿದಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್ ಹಾಗೂ ಜುಡೋ ವಿಭಾಗದ ಸಾಧನೆ ಸೇರಿದಂತೆ ಒಟ್ಟು 16 ಪದಕಗಳು ಭಾರತದ ಬುಟ್ಟಿಗೆ ಸೇರಿದ್ದು, ಪದಕ ಪಟ್ಟಿಯಲ್ಲಿ ದೇಶ ಒಮ್ಮೆಲೇ 4ನೇ ಸ್ಥಾನಕ್ಕೆ ಜಿಗಿದು ಪರಾಕ್ರಮ ಮೆರೆದಿದೆ.

ಬಾಕ್ಸಿಂಗ್‌ನ ಒಟ್ಟು 14 ವಿಭಾಗಗಳ ಪೈಕಿ 10ರಲ್ಲಿ ಭಾರತೀಯರು ಪದಕದ ಸಾಧನೆ ಮಾಡುವ ಮೂಲಕ ಅಪ್ರತಿಮ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಮಹಿಳೆಯರ 54 ಕೆಜಿ ವಿಭಾಗದಲ್ಲಿ ಕೆನಡಾದ ಬಲಿಷ್ಠ ಸ್ಪರ್ಧಿಯನ್ನು 5-0 ಅಂತರದಿಂದ ಧೂಳೀಪಟ ಮಾಡಿದ ಪ್ರೀತಿ ಪವಾರ್ ಅವರು ಭಾರತಕ್ಕೆ ಮೊದಲ ಬಂಗಾರದ ಪದಕ ತಂದುಕೊಟ್ಟರು.

ಈ ವಿಜಯದ ಬೆನ್ನಲ್ಲೇ 57 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಜಾಸ್ಮೀನ್ ಲಂಬೋರಿಯಾ ಹಾಗೂ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್ ಅಥ್ಲೀಟ್ ಅನ್ನು ಮಣಿಸಿದ ಸಾಕ್ಷಿ ಚೌಧರಿ ಚಿನ್ನದ ನಗೆ ಬೀರಿದರು.

ಮತ್ತೊಂದೆಡೆ ಪ್ರಿಯಾ ಘಂಘಾಸ್ 60 ಕೆಜಿ ವಿಭಾಗದಲ್ಲಿ ಕೆನಡಾದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಪ್ರಥಮ ಸ್ಥಾನ ಗಳಿಸಿದರೆ, ಪುರುಷರ 60 ಕೆಜಿ ವಿಭಾಗದ ರೋಮಾಂಚಕ ಫೈನಲ್‌ನಲ್ಲಿ ಸಚಿನ್ ಸಿವಾಚ್ ಅವರು ನಮೀಬಿಯಾದ ಸ್ಪರ್ಧಿಯನ್ನು ಸೋಲಿಸಿ ದೇಶದ ಕೀರ್ತಿ ಪತಾಕೆ ಹಾರಿಸಿದರು.

ಆದರೆ, ಭಾರಿ ನಿರೀಕ್ಷೆ ಮೂಡಿಸಿದ್ದ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್ ಹಾಗೂ ಜಾಡುಮನಿ ಸಿಂಗ್ ಅವರು ಆಸ್ಟ್ರೇಲಿಯಾದ ಎದುರಾಳಿಗಳ ವಿರುದ್ಧ ಹೋರಾಡಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಬಾಕ್ಸಿಂಗ್ ಹೊರತಾಗಿ ಪ್ಯಾರಾ ಶಾಟ್‌ಪುಟ್, ಜಾವೆಲಿನ್ ಎಸೆತ ಮತ್ತು ಟ್ರಿಪಲ್ ಜಂಪ್‌ನಲ್ಲೂ ಭಾರತೀಯರು ಅಮೋಘ ಪ್ರದರ್ಶನ ನೀಡಿದ್ದಾರೆ. ಒಂದೇ ದಿನದ ಈ ಅದ್ಭುತ ಪ್ರದರ್ಶನದಿಂದಾಗಿ ಭಾರತವು ಪದಕ ಪಟ್ಟಿಯಲ್ಲಿ ವೇಲ್ಸ್, ನ್ಯೂಜಿಲೆಂಡ್ ಹಾಗೂ ಸ್ಕಾಟ್ಲೆಂಡ್‌ನಂತಹ ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನಡೆದಿದೆ.

Topics

ಸಂಬಂಧಿತ ಸುದ್ದಿಗಳು