ನವದೆಹಲಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ರಾಷ್ಟ್ರೀಯ ಪಾವತಿ ನಿಗಮ NPCI (National Payments Corporation of India) ಮುಂದಾಗಿದೆ. ನೀವು ಮೊಬೈಲ್‌ನಲ್ಲಿ ಕೇವಲ ಧ್ವನಿ ಅಥವಾ ಪಠ್ಯದ ಮೂಲಕ ಆಜ್ಞೆ ನೀಡಿದರೆ ಸಾಕು, ಹಣ ವರ್ಗಾವಣೆ ಮಾಡುವ ‘ಎಐ ಏಜೆಂಟ್’ ತಂತ್ರಜ್ಞಾನವನ್ನು ಯುಪಿಐಗೆ ಅಳವಡಿಸಲು ಎನ್‌ಪಿಸಿಐ ಯೋಜಿಸುತ್ತಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.ಈ ಹೊಸ ಸಂಭಾಷಣೆ ಆಧಾರಿತ ಎಐ ಪಾವತಿ ವ್ಯವಸ್ಥೆಯು ಭಾರತದ ಫಿನ್‌ಟೆಕ್ ಕ್ಷೇತ್ರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ.
ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ “ನನ್ನ ಸ್ನೇಹಿತನಿಗೆ ₹500 ಕಳುಹಿಸು” ಅಥವಾ “ಕರೆಂಟ್ ಬಿಲ್ ಪಾವತಿಸು” ಎಂದು ಟೈಪ್ ಮಾಡಿದರೆ ಅಥವಾ ಧ್ವನಿ ಸಂದೇಶ ನೀಡಿದರೆ, ಎಐ ಏಜೆಂಟ್ ತಕ್ಷಣವೇ ಆಜ್ಞೆಯನ್ನು ಗ್ರಹಿಸಿ ವಹಿವಾಟನ್ನು ಸಿದ್ಧಪಡಿಸುತ್ತದೆ.
ಎಐ ಏಜೆಂಟ್ ವಹಿವಾಟಿನ ವಿವರಗಳನ್ನು ಪರದೆಯ ಮೇಲೆ ತೋರಿಸಿದ ನಂತರ, ಬಳಕೆದಾರರು ತಮ್ಮ ಯುಪಿಐ ಪಿನ್ (UPI PIN) ನಮೂದಿಸಿ ಪಾವತಿಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಬಹುದು.
ಪ್ರತ್ಯೇಕವಾಗಿ ಯುಪಿಐ ಆಪ್‌ಗಳನ್ನು ತೆರೆದು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಅಗತ್ಯವಿರುವುದಿಲ್ಲ. ವಾಟ್ಸಾಪ್ ಅಥವಾ ವಾಯ್ಸ್ ಅಸಿಸ್ಟೆಂಟ್‌ಗಳ ಮೂಲಕವೇ ನೇರವಾಗಿ ಪಾವತಿಸಬಹುದು.
ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಈ ಎಐ ಏಜೆಂಟ್‌ಗಳು ಕಾರ್ಯನಿರ್ವಹಿಸುವುದರಿಂದ ಗ್ರಾಮೀಣ ಭಾಗದ ಜನರಿಗೂ ಡಿಜಿಟಲ್ ಪಾವತಿ ಸರಳವಾಗಲಿದೆ.
ನಿಯಂತ್ರಣಕ್ಕಾಗಿ ಹೊಸ ಪ್ರೋಟೋಕಾಲ್:
ಸ್ವಯಂಚಾಲಿತ ಪಾವತಿಗಳನ್ನು (Automated Payments) ನಿಯಂತ್ರಿಸಲು ಮತ್ತು ನಿರ್ವಹಿಸಲು ಎನ್‌ಪಿಸಿಐ ‘ಯೂನಿಫೈಡ್ ಏಜೆಂಟ್ ಪ್ರೋಟೋಕಾಲ್’ (Unified Agent Protocol) ಎಂಬ ಫ್ರೇಮ್‌ವರ್ಕ್ ರೂಪಿಸಲಿದೆ. ಆರಂಭಿಕ ಹಂತದಲ್ಲಿ ಸಣ್ಣ ಮೊತ್ತದ ವಹಿವಾಟುಗಳಿಗೆ ಮಾತ್ರ ಈ ಎಐ ಏಜೆಂಟ್‌ಗಳಿಗೆ ಅನುಮತಿ ನೀಡುವ ಸಾಧ್ಯತೆಯಿದೆ.
ತಾಂತ್ರಿಕವಾಗಿ ಎಐ ಏಜೆಂಟ್‌ಗಳಿಂದ ಯಾವುದೇ ತಪ್ಪುಗಳಾಗದಂತೆ ಸುರಕ್ಷಿತ ಫ್ರೇಮ್‌ವರ್ಕ್ ಸಿದ್ಧಪಡಿಸುವುದು ಎನ್‌ಪಿಸಿಐ ಮುಂದಿರುವ ಪ್ರಮುಖ ಸವಾಲಾಗಿದೆ.