ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುವ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಇನ್ಮುಂದೆ ಸಂಪೂರ್ಣವಾಗಿ ಉಚಿತವಾಗಿ ಸಿಗುವುದಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇವುಗಳ ಮಾತೃ ಸಂಸ್ಥೆಯಾದ ‘ಮೆಟಾ’, ತನ್ನ ಬಳಕೆದಾರರಿಗೆ ಹೊಸ ಮಾದರಿಯ ಅನುಭವ ನೀಡಲು ಪಾವತಿ ಆಧಾರಿತ “ಪ್ಲಸ್” ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಪ್ರಕಟಿಸಿದೆ. ಕಂಪನಿಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದ ನವೋಮಿ ಗ್ಲೈಟ್ ಅವರು ಈ ಮಹತ್ವದ ಬದಲಾವಣೆಯನ್ನು ಖಚಿತಪಡಿಸಿದ್ದು, ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳನ್ನು ಬಯಸುವವರಿಗೆ ಮಾತ್ರ ಈ ಶುಲ್ಕ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೆಟಾ ಕಂಪನಿಯು ಪ್ರಕಟಿಸಿರುವ ಸದ್ಯದ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳ ಸಬ್ಸ್ಕ್ರಿಪ್ಷನ್ ದರ ಇನ್ಸ್ಟಾಗ್ರಾಂ ಪ್ಲಸ್ಗೆ 377 ರೂಪಾಯಿ, ಫೇಸ್ಬುಕ್ ಪ್ಲಸ್ಗೆ 377 ರೂಪಾಯಿ ಹಾಗೂ ಫೇಸ್ಬುಕ್ ಪ್ಲಸ್ಗೆ 282 ರೂಪಾಯಿ ಇರಲಿದೆ.ಇಷ್ಟು ದಿನ ಮೆಟಾ ಸಂಸ್ಥೆಯು ಕೇವಲ ಜಾಹೀರಾತುಗಳ ಮೂಲಕವೇ ಭಾರಿ ಪ್ರಮಾಣದ ಆದಾಯ ಗಳಿಸುತ್ತಿತ್ತು. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಇದಕ್ಕಾಗಿ ಮೆಟಾ ಕಂಪನಿಯು ಹೊಸ ಡೇಟಾ ಸೆಂಟರ್‌ಗಳು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ನೂರಾರು ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಈ ಭಾರಿ ಪ್ರಮಾಣದ ವೆಚ್ಚವನ್ನು ಸರಿದೂಗಿಸಲು ಹಾಗೂ ಹೊಸ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಲು ಕಂಪನಿಯು ಇಂತಹದೊಂದು ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು.. ಜೂನ್ 19ರವರೆಗೆ ಭಾರಿ ಮಳೆ ಎಚ್ಚರಿಕೆ!
ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಪ್ಲಸ್ ಯೋಜನೆ ಚಂದಾದಾರಿಕೆ ಪಡೆದ ಗ್ರಾಹಕರು ಇತರರ ಸ್ಟೋರಿಗಳನ್ನು ಅನಾಮಧೇಯವಾಗಿ ವೀಕ್ಷಿಸಬಹುದು. ಅಷ್ಟೇ ಅಲ್ಲದೆ, ತಮ್ಮದೇ ಸ್ಟೋರಿಗಳನ್ನು ಯಾರು ಹೆಚ್ಚು ಬಾರಿ ನೋಡಿದ್ದಾರೆ ಎಂಬ ಇನ್‌ಸೈಟ್ಸ್ ಪಡೆಯಬಹುದು ಮತ್ತು ತಮ್ಮ ಪ್ರೊಫೈಲ್ ರೀಚ್ ಅನ್ನು ಹೆಚ್ಚಿಸಿಕೊಳ್ಳಬಹುದು.
ವಾಟ್ಸಾಪ್ ಪ್ಲಸ್ನಲ್ಲಿ ಬಳಕೆದಾರರು ತಮಗೆ ಇಷ್ಟಬಂದಂತೆ ಆ್ಯಪ್ ಕಸ್ಟಮೈಸ್ ಮಾಡಬಹುದು.
ವಿಶೇಷ ಚಾಟ್ ಥೀಮ್‌ಗಳು, ವೈಯಕ್ತಿಕ ರಿಂಗ್‌ಟೋನ್‌ಗಳು ಮತ್ತು ಪ್ರೀಮಿಯಂ ಸ್ಟಿಕ್ಕರ್‌ಗಳ ಸೌಲಭ್ಯಗಳು ಲಭ್ಯವಿರಲಿವೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಆ್ಯಪ್‌ಗಳ ಸಬ್ಸ್ಕ್ರಿಪ್ಷನ್ ಅನ್ನು ಒಟ್ಟುಗೂಡಿಸಿ “ಮೆಟಾ ಒನ್” ಎಂಬ ಒಂದೇ ಪ್ಯಾಕೇಜ್ ತರಲು ಸಂಸ್ಥೆ ಯೋಚಿಸುತ್ತಿದೆ. ಆದಾಗ್ಯೂ, ಈಗಿರುವ ಸಾಮಾನ್ಯ ಮತ್ತು ಮೂಲಭೂತ ಉಚಿತ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಕಂಪನಿ ಗ್ರಾಹಕರಿಗೆ ಭರವಸೆ ನೀಡಿದೆ.