ಮೊಬೈಲ್ ರೀಚಾರ್ಜ್ ದರ ಮತ್ತೆ ಏರಿಕೆ? 15%ವರೆಗೆ ಹೆಚ್ಚಳ ಸಾಧ್ಯತೆ

ಮೊಬೈಲ್ ರೀಚಾರ್ಜ್ ದರದಲ್ಲಿ ಮುಂದಿನ ಕೆಲ ತಿಂಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. 5ಜಿ ಜಾಲ ವಿಸ್ತರಣೆಯ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ಟೆಲಿಕಾಂ ಕಂಪನಿಗಳು ಹೊಸ ದರ ಪರಿಷ್ಕರಣೆಗೆ ಸಿದ್ಧತೆ ನಡೆಸುತ್ತಿವೆ.

ಮೊಬೈಲ್ ಬಳಕೆದಾರರಿಗೆ ಮತ್ತೊಮ್ಮೆ ದುಬಾರಿ ರೀಚಾರ್ಜ್‌ನ ಹೊರೆ ಬೀಳುವ ಸಾಧ್ಯತೆ ಕಾಣಿಸಿದೆ. ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಮುಂದಿನ ಮೂರುರಿಂದ ನಾಲ್ಕು ತಿಂಗಳೊಳಗೆ ಮೊಬೈಲ್ ರೀಚಾರ್ಜ್ ದರವನ್ನು ಶೇಕಡಾ 12ರಿಂದ 15ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

5ಜಿ ಜಾಲವನ್ನು ದೇಶದಾದ್ಯಂತ ವಿಸ್ತರಿಸಲು ಕಂಪನಿಗಳು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಇದೇ ಕಾರಣದಿಂದ ಹೆಚ್ಚುತ್ತಿರುವ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಉದ್ದೇಶದಿಂದ ಹೊಸ ದರ ಪರಿಷ್ಕರಣೆ ತರಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಕಳೆದ ಕೆಲವು ತಿಂಗಳಿಂದ ರೀಚಾರ್ಜ್ ದರ ಏರಿಕೆಯಾಗುವ ಬಗ್ಗೆ ಚರ್ಚೆಗಳು ನಡೆದಿದ್ದರೂ, ಈಗ ಅದು ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿವೆ. ದರ ಏರಿಕೆ ಜಾರಿಯಾದರೆ ಪ್ರೀಪೇಯ್ಡ್ ಮತ್ತು ಕೆಲವು ಪೋಸ್ಟ್‌ಪೇಯ್ಡ್ ಬಳಕೆದಾರರ ಮಾಸಿಕ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ.

ದೇಶದಲ್ಲಿ 4ಜಿ ಮತ್ತು 5ಜಿ ಸೇವೆಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವುದರಿಂದ ಡೇಟಾ ಬಳಕೆಯೂ ಏರಿಕೆಯಾಗಿದೆ. ಇದರಿಂದ ಹೊಸ ಟವರ್‌ಗಳು, ನೆಟ್‌ವರ್ಕ್ ಸುಧಾರಣೆ ಹಾಗೂ ತಾಂತ್ರಿಕ ಹೂಡಿಕೆಗಳಿಗೆ ಟೆಲಿಕಾಂ ಕಂಪನಿಗಳು ಹೆಚ್ಚಿನ ವೆಚ್ಚ ಮಾಡಬೇಕಾಗಿದೆ.

ಇದೀಗ ಹೆಚ್ಚಿನ ಗ್ರಾಹಕರು 2ಜಿಯಿಂದ 4ಜಿ ಹಾಗೂ 5ಜಿ ಸೇವೆಗೆ ವರ್ಗಾವಣೆಯಾಗುತ್ತಿದ್ದಾರೆ. ಪರಿಣಾಮವಾಗಿ ಕಂಪನಿಗಳ ಆದಾಯದಲ್ಲೂ ಏರಿಕೆ ದಾಖಲಾಗುತ್ತಿದೆ. ಇತ್ತೀಚಿನ ತ್ರೈಮಾಸಿಕದಲ್ಲಿ ಟೆಲಿಕಾಂ ಕಂಪನಿಗಳ ಸರಾಸರಿ ಆದಾಯವು ಸುಮಾರು 1ರಿಂದ 1.5 ಶೇಕಡಾ ಹೆಚ್ಚಳ ಕಂಡಿದೆ.

ದೇಶದ ಬಹುತೇಕ ಜಿಲ್ಲೆಗಳಲ್ಲಿ ಜಿಯೋ ಮತ್ತು ಏರ್‌ಟೆಲ್ 5ಜಿ ಸೇವೆಗಳನ್ನು ವಿಸ್ತರಿಸಿದ್ದು, ವೊಡಾಫೋನ್ ಐಡಿಯಾ ಕೂಡ ಪ್ರಮುಖ ನಗರಗಳಲ್ಲಿ 5ಜಿ ಜಾಲವನ್ನು ವಿಸ್ತರಿಸುತ್ತಿದೆ. ಹೊಸ ಗ್ರಾಹಕರ ಸೇರ್ಪಡೆಯಲ್ಲೂ ಪ್ರಮುಖ ಟೆಲಿಕಾಂ ಸಂಸ್ಥೆಗಳು ಉತ್ತಮ ಬೆಳವಣಿಗೆ ದಾಖಲಿಸುತ್ತಿವೆ.

ರೀಚಾರ್ಜ್ ದರ ಪರಿಷ್ಕರಣೆ ಕುರಿತು ಕಂಪನಿಗಳಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ತಿಂಗಳುಗಳಲ್ಲಿ ಹೊಸ ದರಗಳು ಜಾರಿಯಾಗುವ ಸಾಧ್ಯತೆ ಇದೆ.

Exit mobile version