ಉಡುಪಿ: ಧಾರ್ಮಿಕ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನೊರ್ವನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಉಡುಪಿ ಸಮೀದ ನಿಟ್ಟೂರಿನಲ್ಲಿ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಭೀಕರ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದ್ದು, ಆತನ ಮೊಬೈಲ್ ಹಾಗೂ ಮೋಟಾರು ಸೈಕಲ್ ಕಸಿದುಕೊಂಡು ಜೀವಬೆದರಿಕೆ ಒಡ್ಡಲಾಗಿದೆ.
ಕೊರಂಗ್ರಪಾಡಿ ಗ್ರಾಮದ ಚೆಕ್ ಸಿಟಿ ಬಿಲ್ಡಿಂಗ್ ನಿವಾಸಿ 19 ವರ್ಷದ ಈಶಾನ್ ಶೆಟ್ಟಿ ಎಂಬವರು ಮಾರ್ಚ್ 28 ರಂದು ರಾತ್ರಿ ಉಡುಪಿಯ ನಿಟ್ಟೂರಿನ ಅಡ್ಕದ ಕಟ್ಟೆ ಬಳಿ ನಡೆಯುತ್ತಿದ್ದ ದೈವಸ್ಥಾನದ ಕೋಲಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮಾರ್ಚ್ 29 ರಂದು ನಸುಕಿನ ಜಾವ ಸುಮಾರು 1:30 ಗಂಟೆಗೆ ತಮ್ಮ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದರು.
ಈಶಾನ್ ಅವರು ದೈವಸ್ಥಾನದಿಂದ ಸ್ವಲ್ಪ ದೂರ ಬರುತ್ತಿದ್ದಂತೆ, ಗ್ರೆ ಬಣ್ಣದ ಬೊಲೆರೋ ಕಾರಿನಲ್ಲಿ ಬಂದ ಐವರು ಯುವಕರ ತಂಡ ಅವರನ್ನು ತಡೆದಿದೆ. ಕಾರಿನಿಂದ ಇಳಿದ ಪರಿಚಯದ ವ್ಯಕ್ತಿ ಚರಣ್, “ನಿನ್ನ ಹತ್ತಿರ ಮಾತನಾಡಲಿಕ್ಕಿದೆ, ಗ್ರೌಂಡ್ ಹತ್ತಿರ ಹೋಗೋಣ ಬಾ” ಎಂದು ಹೇಳಿ ಈಶಾನ್ ಅವರ ಬೈಕ್‌ನಲ್ಲೇ ಹಿಂದೆ ಕುಳಿತು ಸಮೀಪದ ಮೈದಾನಕ್ಕೆ ಕರೆದೊಯ್ದಿದ್ದಾನೆ.
Also Read : ಉಡುಪಿಯಲ್ಲಿ ವರುಣನ ಅಬ್ಬರ: ಸುರಿಯುವ ಮಳೆಯಲ್ಲೇ ಸಾಗಿದ ಶ್ರೀಕೃಷ್ಣನ ಚಿನ್ನದ ರಥೋತ್ಸವ
ಮೈದಾನಕ್ಕೆ ತಲುಪುತ್ತಿದ್ದಂತೆ ಚರಣ್ ಅಸಲಿ ರೂಪ ತೋರಿಸಿದ್ದಾನೆ. “ನಿನ್ನ ತಮ್ಮ ನನಗೆ ಹಣ ಕೊಡಬೇಕಿದೆ, ಅದನ್ನು ನೀನೇ ಕೊಡಬೇಕು. ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟರಲ್ಲಿ ಬೊಲೆರೋ ಕಾರಿನಲ್ಲಿ ಬಂದಿದ್ದ ಇತರ ನಾಲ್ವರು ಆರೋಪಿಗಳಾದ ಚಿತ್ತರಂಜನ್, ಧ್ಯಾನ್, ಪ್ರಭು ಮತ್ತು ಯೋಗೀಶ್ ಏಕಾಏಕಿ ಈಶಾನ್ ಮೇಲೆ ಮುಗಿಬಿದ್ದಿದ್ದಾರೆ.
ಡ್ರ್ಯಾಗರ್‌ನಿಂದ ಹಲ್ಲೆ, ವಾಹನ ಜಪ್ತಿ:
ಆರೋಪಿಗಳ ತಂಡ ಈಶಾನ್ ಅವರ ಮುಖ, ತಲೆ, ಎದೆ ಮತ್ತು ಬೆನ್ನಿಗೆ ಮನಬಂದಂತೆ ಗುದ್ದಿದ್ದಾರೆ. ಈ ವೇಳೆ ಆರೋಪಿ ಚಿತ್ತರಂಜನ್ ಎಂಬಾತ ತನ್ನ ಬಳಿಯಿದ್ದ ಡ್ರ್ಯಾಗರ್‌ನ ಹ್ಯಾಂಡಲ್‌ನಿಂದ ಈಶಾನ್ ಅವರ ತೊಡೆ, ಮುಖ ಮತ್ತು ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಹಲ್ಲೆ ನಡೆಸಿದ ನಂತರ ಆರೋಪಿಗಳು ಈಶಾನ್ ಅವರ ಮೊಬೈಲ್ ಫೋನ್, ಮೋಟಾರು ಸೈಕಲ್ ಮತ್ತು ಹೆಲ್ಮೆಟ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ.
ಇದನ್ನೂ ಓದಿ : ಕರಾವಳಿಯಲ್ಲಿ ವರುಣನ ಅಟ್ಟಹಾಸ: ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ದಿನ ‘ಎಲ್ಲೋ ಅಲರ್ಟ್’ ಘೋಷಣೆ
ನೊಂದ ಈಶಾನ್ ಶೆಟ್ಟಿ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
Udupi youth assaulted bike robbed nittur crime
