ಉಡುಪಿಯಲ್ಲಿ ವರುಣನ ಅಬ್ಬರ: ಸುರಿಯುವ ಮಳೆಯಲ್ಲೇ ಸಾಗಿದ ಶ್ರೀಕೃಷ್ಣನ ಚಿನ್ನದ ರಥೋತ್ಸವ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿದಿನ ರಾತ್ರಿ ರಥೋತ್ಸವ ನಡೆಯುವುದು ಪರಂಪರೆ. ಆದರೆ ಶನಿವಾರ ರಾತ್ರಿ ರಥೋತ್ಸವದ ಸಮಯದಲ್ಲೇ ಮೇಘಸ್ಫೋಟದಂತೆ ಮಳೆ ಸುರಿಯಲಾರಂಭಿಸಿತು.

ಉಡುಪಿ: ಕರಾವಳಿ ನಗರಿ ಉಡುಪಿಯಲ್ಲಿ ಶನಿವಾರ ರಾತ್ರಿ ವರುಣನ ಅನಿರೀಕ್ಷಿತ ಅಬ್ಬರ ಕಂಡುಬಂದಿದೆ. ಬೇಸಿಗೆಯ ಬೇಗೆಯ ನಡುವೆ ಏಕಾಏಕಿ ಸುರಿದ ಭಾರೀ ಮಳೆಯನ್ನೂ ಲೆಕ್ಕಿಸದೇ, ಭಕ್ತರ ಆರಾಧ್ಯ ದೈವ ಉಡುಪಿ ಶ್ರೀಕೃಷ್ಣನ ಮಠದಲ್ಲಿ ಮಾತ್ರ ಭಕ್ತಿ ಪರವಶತೆ ಮೇಳೈಸಿತ್ತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ನಡೆದ ‘ಚಿನ್ನದ ರಥೋತ್ಸವ’ದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಮಳೆಯನ್ನೂ ಲೆಕ್ಕಿಸದ ಉಡುಪಿ ಶ್ರೀಕೃಷ್ಣ ಮಠದಲ್ಲಿ ರಥೋತ್ಸವ!

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿದಿನ ರಾತ್ರಿ ರಥೋತ್ಸವ ನಡೆಯುವುದು ಪರಂಪರೆ. ಆದರೆ ಶನಿವಾರ ರಾತ್ರಿ ರಥೋತ್ಸವದ ಸಮಯದಲ್ಲೇ ಮೇಘಸ್ಫೋಟದಂತೆ ಮಳೆ ಸುರಿಯಲಾರಂಭಿಸಿತು. ಮಳೆ ಬರುತ್ತಿದ್ದರೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಉತ್ಸವ ಮುಂದುವರಿಯಿತು.

ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ನೂರಾರು ಭಕ್ತರು ಮಳೆಯಲ್ಲೇ ನೆನೆಯುತ್ತಾ ಭಕ್ತಿಯಿಂದ ‘ಗೋವಿಂದ.. ಗೋವಿಂದ..’ ಎನ್ನುತ್ತಾ ಚಿನ್ನದ ರಥವನ್ನು ಎಳೆದರು. ಮಳೆಯ ಹನಿಗಳ ನಡುವೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಚಿನ್ನದ ರಥದ ವೈಭವ ಕಣ್ಮನ ಸೆಳೆಯುವಂತಿತ್ತು. ಪರ್ಯಾಯ ಶ್ರೀಗಳು ಕೂಡ ಮಳೆಯಲ್ಲೇ ರಥೋತ್ಸವದಲ್ಲಿ ಭಾಗಿಯಾಗಿ ವಿಧಿವಿಧಾನಗಳನ್ನು ಪೂರೈಸಿದರು.

ಇದನ್ನೂ ಓದಿ : ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಸಾಧಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಧಾರ್ಮಿಕ ಆಚರಣೆಗಳಿಗೆ ಮಳೆ ಅಡ್ಡಿ

ಉಡುಪಿ ಜಿಲ್ಲೆಯಾದ್ಯಂತ ಪ್ರಸ್ತುತ ದೈವಾರಾಧನೆ, ನೇಮೋತ್ಸವ ಮತ್ತು ದೇವಸ್ಥಾನಗಳ ವಾರ್ಷಿಕ ರಥೋತ್ಸವಗಳ ಸೀಸನ್ ನಡೀತಾ ಇದೆ. ಶನಿವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದ್ದ ಅನೇಕ ಉತ್ಸವ ಮತ್ತು ನೇಮೋತ್ಸವಗಳಿಗೆ ಈ ಅನಿರೀಕ್ಷಿತ ಮಳೆ ಅಡ್ಡಿಪಡಿಸಿತು. ಬಯಲು ರಂಗಮಂದಿರಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೈವದ ಕೋಲ ನೋಡಲು ಬಂದಿದ್ದ ಜನರು ಮಳೆಯಿಂದಾಗಿ ಸುರಕ್ಷಿತ ಸ್ಥಳಗಳಿಗಾಗಿ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆ, ನಂತರ ಬಿಡುವು ನೀಡಿತು.

ಇದನ್ನೂ ಓದಿ : ಕರಾವಳಿಯಲ್ಲಿ ವರುಣನ ಅಟ್ಟಹಾಸ: ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ದಿನ ‘ಎಲ್ಲೋ ಅಲರ್ಟ್’ ಘೋಷಣೆ

ಹವಾಮಾನ ಇಲಾಖೆಯ ಯಾವುದೇ ಮುನ್ಸೂಚನೆ ಇಲ್ಲದೆ ಬಂದ ಈ ಮಳೆ ಜನರನ್ನು ಕಂಗಾಲು ಮಾಡಿದೆ. ಮಾರುಕಟ್ಟೆಗೆ ಬಂದಿದ್ದ ವ್ಯಾಪಾರಿಗಳು ಮತ್ತು ವಾರಾಂತ್ಯದ ರಜೆಯ ಮಜಾ ಸವಿಯಲು ಹೊರಬಂದಿದ್ದ ಪ್ರವಾಸಿಗರು ಮಳೆಗೆ ಸಿಲುಕಿ ಪರದಾಡಿದರು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಯಿತು. ಆದರೆ, ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ತಂಪು ನೀಡಿದ್ದು ಸಮಾಧಾನದ ಸಂಗತಿಯಾಗಿದೆ.

udupi shree krishna matha chinnada rathotsava rain video viral

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories