ಏನ್​ ಕಾಲ ಬಂತಪ್ಪಾ : ಚರಂಡಿಯಲ್ಲಿ ಕಾಫಿ ಚೆಲ್ಲಿದ ಮಹಿಳೆಗೆ 17 ಸಾವಿರ ರೂಪಾಯಿ ದಂಡ

Coffee fine : ಕೊನೆಯ ಗುಟುಕು ಕಾಫಿಯನ್ನು ಚರಂಡಿಗೆ ಎಸೆಯುವುದು ದೊಡ್ಡ ವಿಚಾರವೇ ಅಲ್ಲ. ಇದರ ಪರಿಣಾಮಗಳ ಬಗ್ಗೆ ಯಾರೂ ಯೋಚನೆ ಕೂಡ ಮಾಡಿರುವುದಿಲ್ಲ. ಆದರೆ ಲಂಡನ್​ನಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ಘಟನೆಯೊಂದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ನಾವು ಮಾಡುವ ಒಂದು ಸಣ್ಣ ಪ್ರಮಾದವು ಯಾವ ರೀತಿಯಲ್ಲಿ ನಮಗೆ ನಷ್ಟ ತಂದೊಡ್ಡಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ. ಲಂಡನ್​ನ ನಿವಾಸಿಯಾದ ಬರ್ಕು ಯೆಸಿಲ್ಯೂರ್ಟ್​ ಬಸ್​ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ರಿಚ್​ಮಂಡ್​ ನಿಲ್ದಾಣದ ಸಮೀಪ ತನ್ನ ಕಾಫಿ ಕಪ್​ನಲ್ಲಿ ಉಳಿದಿದ್ದ ಕೊನೆಯ ಗುಟುಕನ್ನು ಚರಂಡಿಗೆ ಚೆಲ್ಲಿದ್ದರು.

ಈ ರೀತಿ ಮಾಡಿದ್ದಕ್ಕೆ ಈ ಮಹಿಳೆಗೆ ಬರೋಬ್ಬರಿ 17.5 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ. ಈ ವಿಚಾರವಾಗಿ ಬರ್ಕು ಪ್ರತಿಕ್ರಯಿಸಿದ್ದು, ನಾನು ಕಾನೂನು ಉಲ್ಲಂಘನೆ ಮಾಡುತ್ತಿದ್ದೇನೆ ಎಂಬ ಸಣ್ಣ ಅರಿವು ನನಗೆ ಅರಿವಿರಲಿಲ್ಲ.

ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿರುವೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎನ್ನುವ ವಿಚಾರವೇ ನನಗೆ ಭಯತರಿಸುವಂತಿದೆ ಎಂದು ಮಹಿಳೆ ಹೇಳಿದ್ದಾರೆ.

ಬರ್ಕು ಜೀವನದಲ್ಲಿ ನಡೆದ ಈ ಘಟನೆಯು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಪರಿಸರ ಸಂರಕ್ಷಣೆ, ಕಾನೂನುಗಳ ಜಾರಿ ಮತ್ತು ಸಾರ್ವಜನಿಕ ಜಾಗೃತಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು. ಅಕ್ಟೋಬರ್ 22 ರಂದು, ದಂಡವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸುವ ಇಮೇಲ್ ಅನ್ನು ಅವರು ಸ್ವೀಕರಿಸಿದರು.

ಬಸ್​ಗಾಗಿ ಕಾಯುತ್ತಾ ನಿಂತಿದ್ದ ಬರ್ಕು, ಇನ್ನೇನು ಬಸ್​ ಬರುತ್ತದೆ ಎನ್ನುವಾಗ ಬಸ್​ನಲ್ಲಿ ಕಾಫಿ ಚೆಲ್ಲುವುದು ಬೇಡ ಎಂದು ತನ್ನ ಮರುಬಳಕೆ ಮಾಡಬಹುದಾದ ಕಪ್​ನಲ್ಲಿದ್ದ ಕಾಫಿಯ ಕೊನೆಯ ಗುಟುಕನ್ನು ಚರಂಡಿಗೆ ಚೆಲ್ಲಿದ್ದಳು.

ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಥೇಮ್ಸ್​ ಕೌನ್ಸಿಲ್​​ನ ಮೂವರು ಅಧಿಕಾರಿಗಳು ಆಕೆಯ ಎದುರು ಬಂದು ಪರಿಸರ ಸಂರಕ್ಷಣಾ ಕಾಯ್ದೆ 1990 ರ ಅಡಿಯಲ್ಲಿ ದಂಡ ವಿಧಿಸಿದ್ದರು. ಈ ಕಾಯ್ದೆಯ ಅಡಿಯಲ್ಲಿ ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಈ ದಂಡವನ್ನು ಪ್ರಶ್ನಿಸಿ ಬರ್ಕು ದೂರು ದಾಖಲಿಸಿದ್ದರು.

ಮಹಿಳೆಯ ದೂರನ್ನು ಆಲಿಸಿದ ಕೌನ್ಸಿಲ್​ ಆರಂಭದಲ್ಲಿ ಅಧಿಕಾರಿಗಳ ನಡೆ ಸರಿಯಾಗಿದೆ ಎಂದು ಸಮರ್ಥನೆ ನೀಡಿದೆ. ಅಧಿಕಾರಿಗಳು ವೃತ್ತಿಪರವಾಗಿ ಹಾಗೂ ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿತ್ತು.

ಆದರೆ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ ಬಳಿಕ ಕೌನ್ಸಿಲ್​ ದಂಡವನ್ನು ರದ್ದುಗೊಳಿಸಲು ನಿರ್ಧರಿಸಿತು. ಅಲ್ಲದೇ ಕೌನ್ಸಿಲ್​ ಪರವಾಗಿ ಮಹಿಳೆಯ ಬಳಿ ಕ್ಷಮೆಯನ್ನೂ ಕೇಳಲಾಗಿದೆ. ಈ ದಂಡದಿಂದ ನಿಮಗೆ ಉಂಟಾದ ಅಸಮಾಧಾನ ಅಥವಾ ಅನಾನುಕೂಲತೆಗಳಿಗಾಗಿ ದಯವಿಟ್ಟು ನಮ್ಮ ಕ್ಷಮೆಯನ್ನು ಸ್ವೀಕರಿಸಿ ಎಂದು ನೋಟಿಸ್​ನಲ್ಲಿ ಬರೆಯಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ದ್ರವ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ವಿಚಾರವಾಗಿ ಇರುವ ಕಾನೂನನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಲಾಗಿದೆ. ದಂಡ ರದ್ದಾದ ವಿಚಾರ ತಿಳಿದು ಬರ್ಕು ಸಮಾಧಾನ ಹೊರಹಾಕಿದ್ದಾರೆ.

ಈ ಘಟನೆಯು ನನಗೆ ಅನಗತ್ಯ ಆತಂಕವನ್ನುಂಟು ಮಾಡಿತ್ತು. ಚರಂಡಿಯಲ್ಲಿ ದ್ರವ ವಸ್ತುಗಳನ್ನು ಸುರಿಯುವುದು ಅಪರಾಧವೆಂದು ನನಗೆ ಖಂಡಿತ ತಿಳಿದಿರಲಿಲ್ಲ . ಈಗ ನನಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕೆಂಬ ಭಯ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ಮಾಡುವಂತೆ ಆಗಬಿಟ್ಟಿದೆ ಎಂದು ಮಹಿಳೆ ಹೇಳಿದ್ದಾರೆ.

Coffee fine : Woman Fined Rs 17. 5K For Pouring Coffee Down Street Drain, Penalty Later Revoked in London

Exit mobile version