automobileಪ್ರಮುಖ ಸುದ್ದಿಗಳು

ಅಮೆಜಾನ್‌, ಪ್ಲಿಪ್‌ಕಾರ್ಟ್‌ನಲ್ಲಿ ಬೈಕ್‌ ಸೇಲ್‌ : ಡಿಜಿಟಲ್‌ ವೇದಿಕೆಯಲ್ಲೇ ಯೆಜ್ಡಿ ಟ್ರಿನಿಟಿ ಬೈಕ್ಸ್ ಮಾರಾಟ

ನಾವು ಮನೆಯಲ್ಲೇ ಆರಾಮವಾಗಿ ಕುಳಿತು ಒಂದೇ ಒಂದು ಕ್ಲಿಕ್ ಮೂಲಕ ಕಾರುಗಳನ್ನು ಕೂಡ ಬುಕ್ ಮಾಡಿ ಮನೆ ಬಾಗಿಲಿಗೆ ಡೆಲಿವರಿ ಪಡೆಯುವ ದಿನಗಳು ಅತಿ ದೂರವಿಲ್ಲ ಎನಿಸುತ್ತದೆ.

By ರಶ್ಮಿ ಎಸ್. | Rashmi S

1 min read

WhatsAppPost
yezdi trinity bikes available on amazon flipkart sale
yezdi trinity bikes available on amazon flipkart sale

ಇಷ್ಟು ದಿನ ಇ-ಕಾಮರ್ಸ್ ವೇದಿಕೆಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗಳನ್ನು ನಾವು ಕೇವಲ ಸ್ಮಾರ್ಟ್‌ಫೋನ್‌ಗಳು, ಬಟ್ಟೆಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಮಾತ್ರ ಬಳಸುತ್ತಿದ್ದೆವು. ಆದರೆ ಕಾಲ ಬದಲಾಗುತ್ತಿದೆ, ಅದಕ್ಕೆ ತಕ್ಕಂತೆ ಆನ್‌ಲೈನ್ ಶಾಪಿಂಗ್ ಜಗತ್ತು ಕೂಡ ವಿಸ್ತಾರಗೊಳ್ಳುತ್ತಿದೆ.

ಇನ್ಮೇಲೆ ಇ-ಕಾಮರ್ಸ್ ತಾಣಗಳಲ್ಲಿ ಬಟ್ಟೆ, ಮೊಬೈಲ್ ಖರೀದಿಸಿದಷ್ಟೇ ಸುಲಭವಾಗಿ ನಿಮ್ಮ ನೆಚ್ಚಿನ ಬೈಕುಗಳನ್ನು ಕೂಡ ಆರ್ಡರ್ ಮಾಡಬಹುದು ! ಹೌದು, ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಬಹುನಿರೀಕ್ಷಿತ 2026ರ 'ಯೆಜ್ಡಿ ಟ್ರಿನಿಟಿ' ಸರಣಿಯ ಹೊಸ ಬೈಕುಗಳನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವೇದಿಕೆಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮತ್ತು ಮಾರುಕಟ್ಟೆ ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ, ಭವಿಷ್ಯದಲ್ಲಿ ನಾವು ಮನೆಯಲ್ಲೇ ಆರಾಮವಾಗಿ ಕುಳಿತು ಒಂದೇ ಒಂದು ಕ್ಲಿಕ್ ಮೂಲಕ ಕಾರುಗಳನ್ನು ಕೂಡ ಬುಕ್ ಮಾಡಿ ಮನೆ ಬಾಗಿಲಿಗೆ ಡೆಲಿವರಿ ಪಡೆಯುವ ದಿನಗಳು ಅತಿ ದೂರವಿಲ್ಲ ಎನಿಸುತ್ತದೆ.

ಹಬ್ಬದ ಈ ಸಂಭ್ರಮದ ಸೀಸನ್‌ನಲ್ಲಿ ಗ್ರಾಹಕರಿಗೆ ವಾಹನ ಖರೀದಿಯನ್ನು ಮತ್ತಷ್ಟು ಸರಳಗೊಳಿಸಲು ಜಾವಾ ಯೆಜ್ಡಿ ಸಂಸ್ಥೆ ಈ ಡಿಜಿಟಲ್ ಹೆಜ್ಜೆಯನ್ನು ಇಟ್ಟಿದೆ. ಈ ವಿನೂತನ ಸೌಲಭ್ಯದ ಅಡಿಯಲ್ಲಿ ಯೆಜ್ಡಿಯ ಜನಪ್ರಿಯ ಮಾಡೆಲ್‌ಗಳಾದ 'ಯೆಲ್ಲೋ ಫಾಲ್ಕನ್ ಅಡ್ವೆಂಚರ್', 'ಗ್ರೀನ್ ಮಾಂಬಾ ರೋಡ್ಸ್ಟರ್' ಹಾಗೂ 'ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್' ಬೈಕುಗಳನ್ನು ಆನ್‌ಲೈನ್ ಬುಕಿಂಗ್‌ಗೆ ಮುಕ್ತಗೊಳಿಸಲಾಗಿದೆ.

ಆಫ್-ರೋಡಿಂಗ್ ಹಾಗೂ ದೀರ್ಘ ಪ್ರಯಾಣದ ಆಸಕ್ತಿ ಹೊಂದಿರುವ ರೈಡರ್‌ಗಳ ಅಗತ್ಯಕ್ಕೆ ತಕ್ಕಂತೆ ಹೊಸ ಬಣ್ಣಗಳು ಮತ್ತು ಶಕ್ತಿಶಾಲಿ 334ಸಿಸಿ ಎಂಜಿನ್ ಅಪ್‌ಗ್ರೇಡ್‌ಗಳೊಂದಿಗೆ ಈ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಆನ್‌ಲೈನ್‌ನಲ್ಲಿ ಬೈಕ್ ಖರೀದಿಸುವ ಪ್ರಕ್ರಿಯೆಯು ಅತ್ಯಂತ ಸುಲಭವಾಗಿದೆ. ಗ್ರಾಹಕರು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಿ ತಮಗೆ ಇಷ್ಟವಾದ ಮಾಡೆಲ್ ಆಯ್ದುಕೊಂಡು, ಅಲ್ಲಿ ನಿಗದಿಪಡಿಸಲಾದ ಎಕ್ಸ್-ಶೋರೂಮ್ ಬೆಲೆಯನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

ಆ ತಕ್ಷಣವೇ ಗ್ರಾಹಕರ ಹತ್ತಿರದ ಸ್ಥಳೀಯ ಅಧಿಕೃತ ಶೋರೂಮ್ ಡೀಲರ್‌ಗಳು ಗ್ರಾಹಕರನ್ನು ಸಂಪರ್ಕಿಸಿ ಆರ್ಡರ್ ಅನ್ನು ಖಚಿತಪಡಿಸಿಕೊಳ್ಳುತ್ತಾರೆ. ವಿಮೆ , ವಾಹನ ನೋಂದಣಿ ಮತ್ತು ಇತರೆ ಉಳಿಕೆ ಹಣ ಪಾವತಿಯ ಜವಾಬ್ದಾರಿಯನ್ನು ಸ್ಥಳೀಯ ಡೀಲರ್‌ಗಳೇ ವಹಿಸಿಕೊಳ್ಳಲಿದ್ದು, ಎಲ್ಲಾ ದಾಖಲಾತಿಗಳು ಮುಗಿದ ನಂತರ ಗ್ರಾಹಕರು ನೇರವಾಗಿ ಶೋರೂಮ್‌ಗೆ ತೆರಳಿ ತಮ್ಮ ಕನಸಿನ ಬೈಕನ್ನು ಮನೆಗೆ ಕೊಂಡೊಯ್ಯಬಹುದು.

ಇದರೊಂದಿಗೆ ಗ್ರಾಹಕರ ನೆಮ್ಮದಿಯ ಮಾಲೀಕತ್ವಕ್ಕಾಗಿ ಸಂಸ್ಥೆಯು 4 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಹಾಗೂ 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್ ಸೌಲಭ್ಯಗಳನ್ನು ಸಹ ಪ್ರಕಟಿಸಿದೆ.

Topics

ಸಂಬಂಧಿತ ಸುದ್ದಿಗಳು