Kannada News Next

business

ಮತ್ತೆ ಗ್ರಾಹಕರಿಗೆ ಬರೆ ಎಳೆದ ಎಲ್‌ಪಿಜಿ : 3,000ರೂ. ಗಡಿಯತ್ತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ

ಅಕ್ಟೋಬರ್ (october) 1 ರಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (LPG) ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ

By ರಶ್ಮಿ ಎಸ್. | Rashmi S
commercial lpg cylinder price hike approaches 3000 rupees

ನವದೆಹಲಿ : ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂಭ್ರಮದ ಹೊಸ್ತಿಲಲ್ಲಿರುವ ಸಾರ್ವಜನಿಕರಿಗೆ ತೈಲ ಮಾರುಕಟ್ಟೆ ಕಂಪನಿಗಳು ದರ ಏರಿಕೆಯ ಶಾಕ್ ನೀಡಿವೆ. ಅಕ್ಟೋಬರ್ (october) 1 ರಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (LPG) ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಇದು ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿ ಉದ್ಯಮಿಗಳಿಗೆ ದೊಡ್ಡ ಆಘಾತ ತಂದಿದೆ.

ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಗಣನೀಯವಾಗಿ ಜಿಗಿದಿದೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ದೇಶದಲ್ಲೇ ಅತಿ ಹೆಚ್ಚು ಅಂದರೆ ಬರೋಬ್ಬರಿ 71.50 ರೂಪಾಯಿ ಏರಿಕೆಯಾಗಿದ್ದು, ಅಲ್ಲಿ ಹೊಸ ದರ 3,100.50 ರೂಪಾಯಿಗೆ ತಲುಪಿದೆ.

ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೂಡ ವಾಣಿಜ್ಯ ಸಿಲಿಂಡರ್ ದರ ₹60 ಕ್ಕೂ ಹೆಚ್ಚು ದುಬಾರಿಯಾಗಿದ್ದು, ಪರಿಷ್ಕೃತ ದರವು ₹2,898 ಕ್ಕೆ ಮುಟ್ಟಿದೆ. ರಾಜಧಾನಿ ದೆಹಲಿಯಲ್ಲಿ 2,810 ರೂಪಾಯಿ ಹಾಗೂ ಮುಂಬೈನಲ್ಲಿ 2,764 ರೂಪಾಯಿಗೆ ಹೊಸ ದರಗಳು ನಿಗದಿಯಾಗಿವೆ.

ಹಬ್ಬಗಳ ಸೀಸನ್‌ನಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆಯಲ್ಲಿದ್ದ ಹೋಟೆಲ್ ಮಾಲೀಕರಿಗೆ ಈ ಬೆಲೆ ಏರಿಕೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಇಂಧನ ವೆಚ್ಚ ಹೆಚ್ಚಿರುವುದರಿಂದ ಮುಂಬರುವ ದಿನಗಳಲ್ಲಿ ಕಾಫಿ, ಟೀ, ತಿಂಡಿ ಹಾಗೂ ಊಟದ ದರಗಳನ್ನು ಶೇಕಡಾ 5 ರಿಂದ 10 ರಷ್ಟು ಹೆಚ್ಚಿಸಲು ಹೋಟೆಲ್ ಮತ್ತು ಬೇಕರಿಗಳ ಸಂಘಗಳು ಚಿಂತನೆ ನಡೆಸುತ್ತಿವೆ.

ಆದಾಗ್ಯೂ, ಜನಸಾಮಾನ್ಯರಿಗೆ ಸದ್ಯಕ್ಕೆ ಸಮಾಧಾನಕರ ಸುದ್ದಿಯೊಂದಿದೆ. ಮನೆಗಳಲ್ಲಿ ಬಳಸುವ 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 944.50 ರೂಪಾಯಿ ಹಾಗೂ ದೆಹಲಿಯಲ್ಲಿ 942 ರೂಪಾಯಿಗಳಲ್ಲೇ ಸ್ಥಿರವಾಗಿದೆ. ಇದರಿಂದಾಗಿ ಗೃಹಿಣಿಯರ ಮಾಸಿಕ ಬಜೆಟ್‌ಗೆ ಸದ್ಯಕ್ಕೆ ಯಾವುದೇ ತೊಂದರೆಯಾಗಿಲ್ಲವಾದರೂ, ಹೊರಗಿನ ತಿಂಡಿ ತಿನಿಸುಗಳ ಬೆಲೆ ಏರಿಕೆಯಾಗುವ ಭೀತಿ ಮಾತ್ರ ಗ್ರಾಹಕರನ್ನು ಕಾಡುತ್ತಿದೆ.