ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ವಾರದ ಕೊನೆಯ ಕಿಚ್ಚನ ಪಂಚಾಯಿತಿ ಸಂಚಿಕೆಯು ಎಂದಿನಂತೆ ಅತ್ಯಂತ ರೋಚಕ ಹಾಗೂ ಕುತೂಹಲಕಾರಿ ಚರ್ಚೆಗಳಿಗೆ ಸಾಕ್ಷಿಯಾಗಿದೆ. ಈ ವಾರ ಮನೆಯ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಬಿಗ್ ಬಾಸ್ ಆಸ್ತಿಗೆ ಹಾನಿ ಮಾಡಿದ ಸ್ಪರ್ಧಿಗಳಿಗೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಂಚಿಕೆಯ ಪ್ರಮುಖ ಹೈಲೈಟ್ ಎಂದರೆ, ಸ್ಪರ್ಧಿ ಪ್ರಶಾಂತ್ ಅವರು ಸ್ವಿಮ್ಮಿಂಗ್ ಪೂಲ್ಗೆ ಬಿದ್ದು ತಮಗೆ ನೀಡಲಾಗಿದ್ದ ಮೈಕ್ ಅನ್ನು ಹಾಳು ಮಾಡಿಕೊಂಡ ವಿಷಯ.
ಈ ಬಗ್ಗೆ ವೀಕೆಂಡ್ ಪಂಚಾಯಿತಿಯಲ್ಲಿ ಗಂಭೀರ ಚರ್ಚೆ ನಡೆಸಿದ ಸುದೀಪ್, ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುವ ಮೈಕ್ನ ಅಸಲಿ ಬೆಲೆಯನ್ನು ಕೇಳಿದರು. ಈ ವೇಳೆಯಲ್ಲಿ ಪ್ರಶಾಂತ್ 25 ಸಾವಿರ ರೂಪಾಯಿ ಎಂದು ಅಂದಾಜಿಸಿದ್ರೆ, ತಾಂಡವ್ 78 ಸಾವಿರ ಎಂದು ಅಂದಾಜಿಸಿದ್ದಾರೆ.
ಆದರೆ ಸುದೀಪ್ ಅವರು ಆ ಮೈಕ್ನ ನೈಜ ಬೆಲೆ ಬರೋಬ್ಬರಿ ₹2.5 ಲಕ್ಷ ಎಂದು ಬಹಿರಂಗಪಡಿಸಿದಾಗ ಇಡೀ ಮನೆಯವರು ಮತ್ತು ವೀಕ್ಷಕರು ಶಾಕ್ಗೆ ಒಳಗಾದರು. ಇಷ್ಟು ದೊಡ್ಡ ಮೊತ್ತದಲ್ಲಿ ಮಾರುಕಟ್ಟೆಯಲ್ಲಿ ಒಂದು ಐಷಾರಾಮಿ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕನ್ನೇ ಖರೀದಿಸಬಹುದು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.
ಮದುವೆಯಾಗಿ ಎರಡೇ ತಿಂಗಳಲ್ಲಿ ಸಾಲ ಮಾಡಿಕೊಂಡಿರುವ ಪ್ರಶಾಂತ್ಗೆ, ಈ ನಷ್ಟದ ಹಣವನ್ನು ಅವರ ವಾರಾವಾರು ಸಂಭಾವನೆಯಿಂದಲೇ ಕಡಿತಗೊಳಿಸಲಾಗುವುದು ಎಂದು ಸುದೀಪ್ ತಮಾಷೆಯಾಗಿಯೇ ಕಾಲೆಳೆದರು.
ಇದೇ ವೇಳೆ, ಮನೆಯಲ್ಲಿ ಪಿಸುಮಾತನಾಡಿ ನಿಯಮ ಉಲ್ಲಂಘಿಸಿದ ಆಸಿಯಾ ಹಾಗೂ ಕ್ಯಾಪ್ಟನ್ ಧನುಷ್ ನೀಡಿದ ಶಿಕ್ಷೆಯನ್ನು ಪಾಲಿಸದ ಅವರ ನಡವಳಿಕೆಯನ್ನು ಸುದೀಪ್ ತೀವ್ರವಾಗಿ ಖಂಡಿಸಿದರು.
ಬಿಗ್ ಬಾಸ್ ಮನೆಯ ನಿಯಮಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ಕಿಚ್ಚ, ಮುಂದಿನ ದಿನಗಳಲ್ಲಿ ಯಾರಾದರೂ ಪಿಸುಗುಟ್ಟಿ ಮಾತನಾಡಿದರೆ ಅವರಿಗೆ ಒಂದು ವಾರಗಳ ಕಾಲ ಮೈಕ್ ನೀಡಲಾಗುವುದಿಲ್ಲ ಎಂಬ ಹೊಸ ಕಠಿಣ ನಿಯಮವನ್ನು ಘೋಷಿಸಿ ಎಚ್ಚರಿಕೆ ನೀಡಿದ್ದಾರೆ.