entertainmentಪ್ರಮುಖ ಸುದ್ದಿಗಳು

ಜೈಲರ್​ 2 ಆರ್ಭಟಕ್ಕೂ ಜಗ್ಗದ ಪ್ರೇಮದ ಊರಲಿ : 100 ಕೋಟಿ ಕ್ಲಬ್‌ನತ್ತ ಪ್ರೇಮದ ಊರಲಿ ಸಿನಿಮಾ

ಬಿಡುಗಡೆಯಾಗಿ 23 ದಿನಗಳು ಕಳೆದರೂ ಚಿತ್ರದ ಕಲೆಕ್ಷನ್ ವೇಗ ತಗ್ಗಿಲ್ಲ. ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, 23ನೇ ದಿನವಾದ ಶನಿವಾರ ಒಂದೇ ದಿನ ಈ ಚಿತ್ರ ಸುಮಾರು 4.15 ಕೋಟಿ ರೂಪಾಯಿ ಗಳಿಸಿದೆ.

By ರಶ್ಮಿ ಎಸ್. | Rashmi S

1 min read

WhatsAppPost
Premada Oorali Kannada Movie Reach 100 Crore Club Despite Jailer 2's Box Office Storm
Premada Oorali Kannada Movie Reach 100 Crore Club Despite Jailer 2's Box Office Storm

ಬೆಂಗಳೂರು : ಕೇವಲ 2 ರಿಂದ 3 ಕೋಟಿ ರೂಪಾಯಿಗಳ ಅತ್ಯಲ್ಪ ಬಜೆಟ್‌ನಲ್ಲಿ ನಿರ್ಮಾಣವಾದ ಕನ್ನಡದ ಪ್ರೇಮದ ಊರಲಿ ಚಲನಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಇತಿಹಾಸ ಸೃಷ್ಟಿಸುತ್ತಿದೆ.

ಯಾವುದೇ ರೀತಿಯ ಅದ್ದೂರಿ ಪ್ರಚಾರವಿಲ್ಲದೆ, ಕೇವಲ ಪ್ರೇಕ್ಷಕರ ಬಾಯಿಮಾತಿನ ಸಕಾರಾತ್ಮಕ ವಿಮರ್ಶೆಗಳಿಂದಲೇ ಈ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಜೈತ್ರಯಾತ್ರೆ ಮುಂದುವರಿಸಿದೆ.

ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಜೈಲರ್ 2 ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ, ಅದರ ಅಬ್ಬರಕ್ಕೆ ಕಮ್ಮಿಯಾಗದಂತೆ ಈ ಫೀಲ್ ಗುಡ್ ಲವ್ ಸ್ಟೋರಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸೆಪ್ಟೆಂಬರ್ 25 ರಂದು ಕೇವಲ 60 ಪ್ರದರ್ಶನಗಳೊಂದಿಗೆ ಅತ್ಯಂತ ಸರಳವಾಗಿ ಚಿತ್ರಮಂದಿರ ಪ್ರವೇಶಿಸಿದ್ದ ಈ ಸಿನಿಮಾ, ಇಂದು ಬರೋಬ್ಬರಿ 1,300 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಸಾಧನೆಯಾಗಿದೆ.

ಬಿಡುಗಡೆಯಾಗಿ 23 ದಿನಗಳು ಕಳೆದರೂ ಚಿತ್ರದ ಕಲೆಕ್ಷನ್ ವೇಗ ತಗ್ಗಿಲ್ಲ. ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, 23ನೇ ದಿನವಾದ ಶನಿವಾರ ಒಂದೇ ದಿನ ಈ ಚಿತ್ರ ಸುಮಾರು 4.15 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ವಿಶ್ವದಾದ್ಯಂತ ಚಿತ್ರದ ಒಟ್ಟು ಒಟ್ಟಾರೆ ಗಳಿಕೆ ಬರೋಬ್ಬರಿ 86.72 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.

ವಿಶೇಷವೆಂದರೆ, ಈ ಚಿತ್ರದ ಅಸಲಿ ಕಲೆಕ್ಷನ್ ಶಕ್ತಿ ಕರುನಾಡಿನಲ್ಲಿಯೇ ಗೋಚರಿಸುತ್ತಿದ್ದು, ರಾಜ್ಯದ ಬಾಕ್ಸ್ ಆಫೀಸ್‌ನಿಂದಲೇ ಈಗಾಗಲೇ 72.52 ಕೋಟಿ ರೂಪಾಯಿಗೂ ಅಧಿಕ ಮೊತ್ತ ಹರಿದುಬಂದಿದೆ. ಚಿತ್ರದ ಈ ಅದ್ಭುತ ಓಟವನ್ನು ಗಮನಿಸಿದರೆ ಸಿನಿಮಾ ಶೀಘ್ರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರುವುದು ನಿಶ್ಚಿತ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಚಿತ್ರದ ಈ ಕಮರ್ಷಿಯಲ್ ಯಶಸ್ಸಿನ ಜೊತೆಗೆ ಚಿತ್ರರಂಗದ ದಿಗ್ಗಜರಾದ ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ಮತ್ತು ರಮೇಶ್ ಅರವಿಂದ್ ಮುಂತಾದವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಕೊಂಡಾಡಿದ್ದಲ್ಲದೆ, ನಾಯಕಿ ತಪಸ್ವಿನಿ ಪೂಣಚ್ಚರಿಗೆ ವೈಯಕ್ತಿಕವಾಗಿ ಕರೆ ಮಾಡಿ ಅಭಿನಂದಿಸಿದ್ದಾರೆ. ಒಟ್ಟಾರೆಯಾಗಿ, ಮನೋಜ್ ಕುಮಾರ್ ನಿರ್ದೇಶನದ ಪ್ರೇಮದ ಊರಲಿ ಚಿತ್ರವು ಕಂಟೆಂಟ್ ಚೆನ್ನಾಗಿದ್ದರೆ ಕನ್ನಡಿಗರು ಕೈಬಿಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Topics

ಸಂಬಂಧಿತ ಸುದ್ದಿಗಳು