Kannada News Next

entertainment

ಬಿಗ್ ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ತಾರತಮ್ಯ: ಸೆಲೆಬ್ರಿಟಿಗಳಿಗೂ ಇಲ್ಲದ ನಿಯಮ ಸಾಮಾನ್ಯರಿಗೇಕೆ?

ಬಿಗ್ ಬಾಸ್ ಮನೆ ಪ್ರವೇಶಿಸಲು ಕಾತುರರಾಗಿರುವ 'ಸಾಮಾನ್ಯ ಜನಸಾಮಾನ್ಯರಿಗೆ' ನೀಡಲಾಗುತ್ತಿರುವ ಸವಾಲುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

By Meghana Pranuth | ಮೇಘನಾ ಪ್ರಣೂತ್‌
bigg-boss-13-agnipareekshe

ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಟಾಸ್ಕ್ ಅಥವಾ ಡ್ರಾಮಾದಿಂದ ಅಲ್ಲ, ಬದಲಿಗೆ ಆಯೋಜಕರು ಸಾಮಾನ್ಯ ಸ್ಪರ್ಧಿಗಳಿಗೆ ನೀಡುತ್ತಿರುವ 'ಅಗ್ನಿಪರೀಕ್ಷೆ' ಮತ್ತು ಅದರಲ್ಲಿ ಎದ್ದು ಕಾಣುತ್ತಿರುವ ಸ್ಪಷ್ಟ 'ತಾರತಮ್ಯ'ದ ಕಾರಣಕ್ಕೆ!

ಬಿಗ್ ಬಾಸ್ ಮನೆ ಪ್ರವೇಶಿಸಲು ಕಾತುರರಾಗಿರುವ 'ಸಾಮಾನ್ಯ ಜನಸಾಮಾನ್ಯರಿಗೆ' ನೀಡಲಾಗುತ್ತಿರುವ ಸವಾಲುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ವೇದಿಕೆಯ ಮೇಲೆ ಮನೆ ಪ್ರವೇಶಿಸಲು ಬಂದ ಸಾಮಾನ್ಯ ಸ್ಪರ್ಧಿಗಳಿಗೆ ನೀಡಲಾಗುತ್ತಿರುವ ಶಿಕ್ಷೆಗಳು ಸಾರ್ವಜನಿಕರನ್ನು ಕಂಗಾಲುಗೊಳಿಸಿವೆ.

ಒಬ್ಬ ಸ್ಪರ್ಧಿ ವರ್ಷಗಳ ಕಾಲ ಕಷ್ಟಪಟ್ಟು ಪಡೆದ 'ಗಿನ್ನಿಸ್ ದಾಖಲೆ'ಯ ಪ್ರಮಾಣಪತ್ರವನ್ನು ಪ್ರತ್ಯಕ್ಷವಾಗಿಯೇ ಹರಿದು ಹಾಕುವುದು. ಸಾರ್ವಜನಿಕವಾಗಿ ತಲೆ ಬೋಳಿಸಿಕೊಳ್ಳಲು ಒತ್ತಾಯಿಸುವುದು. ಹಾಗಲಕಾಯಿ ಜ್ಯೂಸ್ ಕುಡಿಸಿ ಅವರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವುದು. ಒಬ್ಬ ವ್ಯಕ್ತಿಯ ವರ್ಷಗಳ ಶ್ರಮ, ಸಾಧನೆ ಮತ್ತು ಅವರ ಆತ್ಮಾಭಿಮಾನವನ್ನು ಕೇವಲ 'ಟಿಆರ್‌ಪಿ (TRP)' ಮತ್ತು ಮನರಂಜನೆಗಾಗಿ ಪಣಕ್ಕಿಡುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಮೂಡಿದೆ.

ಇದೇ ಬಿಗ್ ಬಾಸ್ ವೇದಿಕೆಯಲ್ಲಿ ಸೆಲೆಬ್ರಿಟಿಗಳು ಬಂದಾಗ ಅವರಿಗೆ ಸಿಗುವ ಗೌರವ ಮತ್ತು ಮರ್ಯಾದೆಯೇ ಬೇರೆ, ಅದೇ ಒಬ್ಬ ಸಾಮಾನ್ಯ ಪ್ರಜೆ ಬಂದಾಗ ನೀಡುವ ಕಿರುಕುಳವೇ ಬೇರೆ ಎಂಬ ಅಪಸ್ವರ ಗಟ್ಟಿಯಾಗಿ ಕೇಳಿಬರುತ್ತಿದೆ.

"ಸೆಲೆಬ್ರಿಟಿಗಳಿಗೂ ಇದೇ ರೀತಿ ತಲೆ ಬೋಳಿಸಿಕೊಳ್ಳಿ, ನಿಮಗೆ ಸಿಕ್ಕ ಪ್ರಶಸ್ತಿಗಳನ್ನು ಹರಿದು ಹಾಕಿ ಅಂತ ಹೇಳ್ತಿತಾ". ಜನಸಾಮಾನ್ಯರ ಬಿಗ್ ಬಾಸ್ ಕನಸನ್ನು ಅಸ್ತ್ರವಾಗಿ ಬಳಸಿಕೊಂಡು, ಅವರ ಅಸಹಾಯಕತೆಯನ್ನು ಶೋ ಆಯೋಜಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ?" ಎಂಬ ಪ್ರಶ್ನೆಗಳನ್ನು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಎತ್ತುತ್ತಿದ್ದಾರೆ.

ರಿಯಾಲಿಟಿ ಶೋಗಳಲ್ಲಿ ಮನರಂಜನೆ ಇರಬೇಕು ನಿಜ. ಆದರೆ ಆ ಮನರಂಜನೆ ಒಬ್ಬ ವ್ಯಕ್ತಿಯ ಗೌರವ, ಸಾಧನೆ ಮತ್ತು ಸ್ವಾಭಿಮಾನವನ್ನು ತುಳಿದು ಬರುವಂತಿರಬಾರದು. ಸ್ಪರ್ಧೆ ಎಂದರೆ ನಿಯಮಗಳು ಸೆಲೆಬ್ರಿಟಿ ಹಾಗೂ ಸಾಮಾನ್ಯ ಇಬ್ಬರಿಗೂ ಸಮಾನವಾಗಿರಬೇಕು. ಟಿಆರ್‌ಪಿ ಓಟದಲ್ಲಿ 'ಕಾಮನ್ ಮ್ಯಾನ್' ಭಾವನೆಗಳ ಜೊತೆ ಚೆಲ್ಲಾಟವಾಡುವುದು ನಿಲ್ಲಬೇಕು ಎಂಬುದೇ ಈಗ ಪ್ರೇಕ್ಷಕರ ಒಕ್ಕೊರಲ ಧ್ವನಿ.