ಕನ್ನಡ ಚಿತ್ರರಂಗದ ಇತಿಹಾಸವನ್ನು 'KGF'ಗಿಂತ ಮೊದಲು ಮತ್ತು 'KGF' ನಂತರ ಎಂದು ಸ್ಪಷ್ಟವಾಗಿ ವಿಭಾಗಿಸಬಹುದು. ಅಂದು ಮೈಸೂರಿನಿಂದ ಬೆಂಗಳೂರಿಗೆ ಪುಡಿಗಾಸು ಹಿಡಿದುಕೊಂಡು ಬಂದ ಒಬ್ಬ ಸಾಮಾನ್ಯ ಹುಡುಗ, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ; ತಮ್ಮ ಅಚಲ ಛಲ ಮತ್ತು ಶ್ರಮದಿಂದ ಗ್ಲೋಬಲ್ ಮಟ್ಟಕ್ಕೆ ಬೆಳೆದು ನಿಂತಿರುವ 'ರಾಕಿಂಗ್ ಸ್ಟಾರ್' ಯಶ್.
ಯಶ್ ಈಗ ಕೇವಲ ಹಿಟ್ ಅಥವಾ ಫ್ಲಾಪ್‌ಗಳ ಲೆಕ್ಕಾಚಾರವನ್ನು ದಾಟಿ ಬಹುದೂರ ಸಾಗಿದ್ದಾರೆ. "ಟಾಕ್ಸಿಕ್" ಚಿತ್ರದ ಕಂಟೆಂಟ್ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆದರೆ, ಬಾಕ್ಸ್ ಆಫೀಸ್‌ನಲ್ಲಿ 2000 ಕೋಟಿ ರೂಪಾಯಿ ಕಲೆಕ್ಷನ್ ದಾಟಿದರೂ ಅಚ್ಚರಿಯಿಲ್ಲ ಎನ್ನುವುದು ಚಿತ್ರರಂಗದ ಲೆಕ್ಕಾಚಾರ. ಇದರ ಜೊತೆಗೆ ಯಶ್ 'ರಾಮಾಯಣ' ಚಿತ್ರದಲ್ಲೂ ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಕೇವಲ 2 ತಿಂಗಳ ಅವಧಿಯಲ್ಲಿ ಇವೆರಡೂ ಸಿನಿಮಾಗಳು ಜಾಗತಿಕ ತೆರೆಯಲ್ಲಿ ತೆರೆಕಾಣಲಿದ್ದು, ಯಶ್ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗಿ ಹೊರಹೊಮ್ಮುವುದು ಖಚಿತವಾಗಿದೆ.
ಯಶ್ ಅವರ ಜೀವನವೇ ಒಂದು ದೊಡ್ಡ ಮ್ಯಾನಿಫೆಸ್ಟೇಷನ್ (Manifestation). 'ರಾಜಾಹುಲಿ' ಸಿನಿಮಾದ ಸಮಯದಲ್ಲಿ ಯಶ್ ಮೊಬೈಲ್‌ನಲ್ಲಿ ಶಾರುಖ್ ಖಾನ್ ಅವರ 'ಡಾನ್' ಚಿತ್ರದ ಬಿಜಿಎಂ ರಿಂಗ್‌ಟೋನ್ ಆಗಿತ್ತು. ವಿಶೇಷವೆಂದರೆ, ಇಂದು ಅದೇ ಶಾರುಖ್ ಖಾನ್ ಅವರು ಯಶ್ ಅವರನ್ನು ಪ್ರೀತಿಯಿಂದ ಡಿನ್ನರ್‌ಗೆ ಆಹ್ವಾನಿಸುವ ಹಂತಕ್ಕೆ ಬೆಳೆದಿದ್ದಾರೆ. 'ಝೀರೋ' ಚಿತ್ರದ ಎದುರು 'KGF' ಬಿಡುಗಡೆಯಾಗಿ ಗೆದ್ದಾಗಲೂ ಯಶ್ ಅಹಂಕಾರ ಪ್ರದರ್ಶಿಸದೆ ತೋರಿದ ವಿನಯವಂತಿಕೆ ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿಯಾಗಿದೆ.
ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ 'ಮಾಸ್ಟರ್ ಪೀಸ್' ಶೂಟಿಂಗ್ ನಡೆಯುತ್ತಿದ್ದಾಗಲೇ, "ಮುಂದೊಂದು ದಿನ ಕನ್ನಡ ಸಿನಿಮಾವನ್ನು ಇಡೀ ದೇಶಕ್ಕೆ ಕೊಂಡೊಯ್ಯಬೇಕು" ಎಂದು ಅವರು ಹೇಳಿದ್ದ ಮಾತು ಅವರಲ್ಲಿದ್ದ ದೂರದೃಷ್ಟಿಯನ್ನು ತಿಳಿಸುತ್ತದೆ.
ಯಶಸ್ಸಿನ ಶಿಖರದಲ್ಲೂ ಅದೇ ಸರಳತೆ!
ಯಶ್ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ತಮ್ಮ ಹಳೆಯ ಗೆಳೆಯರನ್ನು ಹಾಗೂ ಜೊತೆಗಿದ್ದ ಕಲಾವಿದರನ್ನು ಮರೆತಿಲ್ಲ. 'ಉಗ್ರಂ' ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಇದೇ ಯಶ್. ಹಾಗೆಯೇ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೆ 'ಟಾಕ್ಸಿಕ್' ನಂತಹ ಬೃಹತ್ ಸಿನಿಮಾದ ಜವಾಬ್ದಾರಿ ನೀಡಿದ್ದೂ ಅವರ ಪಾರ್ಖಿಗೆ ಸಾಕ್ಷಿ.
ಇನ್ನೇನು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲು ದಿನಗಣನೆ ಶುರುವಾಗಿದ್ದು, ಕನ್ನಡದ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಜಗತ್ತನ್ನೇ ಗೆಲ್ಲಲು ಹೊರಟಿರುವ ಯಶ್ ಅವರ ಈ ಅಭೂತಪೂರ್ವ ಪಯಣಕ್ಕೆ ಪ್ರತಿಯೊಬ್ಬ ಕನ್ನಡಿಗರ ಬೆಂಬಲ ಸದಾ ಇರಲಿದೆ.