Kannada News Next

entertainment

ಸ್ಪೈಡರ್​ ಮ್ಯಾನ್​ ಹವಾ..! ಭಾರತದಲ್ಲಿ ವಿದೇಶಿ ಸಿನಿಮಾ ಅಬ್ಬರ - ದುರಂಧರ್​,ಪಠಾಣ್​ ಕಲೆಕ್ಷನ್​ ಹಿಂದಿಕ್ಕಿದ ಸ್ಪೈಡರ್​ ಮ್ಯಾನ್​

ಹಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಭಾರತೀಯ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುನಾಮಿ ಎಬ್ಬಿಸಿದೆ.

By ರಶ್ಮಿ ಎಸ್. | Rashmi S

ಹಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಭಾರತೀಯ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುನಾಮಿ ಎಬ್ಬಿಸಿದೆ. ಜುಲೈ 3೦ ರಂದು ದೇಶದಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಕಂಡ ಈ ಚಿತ್ರವು, ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 3೦೦ ಕೋಟಿ ರೂಪಾಯಿಗಳ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

ಭಾರತದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಇಷ್ಟು ಕಡಿಮೆ ಅವಧಿಯಲ್ಲಿ ಈ ದೊಡ್ಡ ಮೈಲಿಗಲ್ಲು ತಲುಪಿದ ಮೊದಲ ಹಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ ಮೂಲಕ ಲಕ್ಷಾಂತರ ಟಿಕೆಟ್‌ಗಳು ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದವು.

ಟಾಮ್ ಹಾಲಂಡ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ನಾಲ್ಕನೇ ಸೋಲೋ ಚಿತ್ರವು ಮೊದಲ ದಿನವೇ ದಾಖಲೆಯ 72 ಕೋಟಿ ರೂಪಾಯಿ ಗಳಿಸುವ ಮೂಲಕ ಭಾರತದ ಸಿನಿರಂಗವನ್ನು ಬೆಚ್ಚಿಬೀಳಿಸಿತ್ತು. ಇದು ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರದ ಮೊದಲ ದಿನದ ಗಳಿಕೆ 67 ಕೋಟಿ ಹಾಗೂ 2025ರ ಬ್ಲಾಕ್‌ಬಸ್ಟರ್ 'ಧುರಂಧರ್' ಸಿನಿಮಾದ ರೆಕಾರ್ಡ್ ಅನ್ನು ಧೂಳೀಪಟ ಮಾಡಿದೆ.

ಕೇವಲ ಎರಡೇ ದಿನಕ್ಕೆ 130 ಕೋಟಿ ರೂಪಾಯಿ ದಾಟಿದ್ದ ಈ ಚಿತ್ರದ ಗಳಿಕೆ, ವೀಕೆಂಡ್‌ನಲ್ಲಿ ಮತ್ತಷ್ಟು ದುಪ್ಪಟ್ಟಾಗಿದ್ದು, ಈ ಹಿಂದೆ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಸಿನಿಮಾ ಎಂಬ ದಾಖಲೆ ಹೊಂದಿದ್ದ 'ಅವೇಂಜರ್ಸ್: ಎಂಡ್ ಗೇಮ್' ಮೈಲಿಗಲ್ಲನ್ನು ಕೇವಲ ಮೂರೇ ದಿನಗಳಲ್ಲಿ ಬದಿಗೊತ್ತಿ ಮುನ್ನುಗ್ಗಿದೆ.

ಚಿತ್ರರಂಗದ ತಜ್ಞರ ಪ್ರಕಾರ, ಮುಂದಿನ ಒಂದು ವಾರದವರೆಗೆ ಭಾರತೀಯ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಚಿತ್ರಮಂದಿರಗಳಲ್ಲಿ 'ಸ್ಪೈಡರ್ ಮ್ಯಾನ್'ಗೆ ಯಾವುದೇ ಬಲವಾದ ಎದುರಾಳಿ ಇಲ್ಲದಿರುವುದರಿಂದ ಮುಂಬರುವ ದಿನಗಳಲ್ಲಿ ಇದರ ಒಟ್ಟು ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತವಾಗಿದೆ.

ಮಲ್ಟಿಪ್ಲೆಕ್ಸ್ ಮಾತ್ರವಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದರಿಂದ, ಈ ವಾರದ ಅಂತ್ಯದ ವೇಳೆಗೆ ಈ ಸಿನಿಮಾ ಮತ್ತಷ್ಟು ಹಳೆಯ ದಾಖಲೆಗಳನ್ನು ಪುಡಿಗಟ್ಟಿ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಯಾವುದೇ ಸಂಶಯವಿಲ್ಲ.