3 ತಿಂಗಳಲ್ಲಿ 25 KG ತೂಕ ಇಳಿಸಿಕೊಂಡ ನಟಿ ಐಶ್ವರ್ಯಾ ಸಾಲೀಮಠ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯಾ ಸಾಲೀಮಠ (Aishwarya Salimath) ಅವರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅಭಿಮಾನಿಗಳ ವಲಯದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Aishwarya Salimath
Aishwarya Salimath

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯಾ ಸಾಲೀಮಠ (Aishwarya Salimath) ಅವರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅಭಿಮಾನಿಗಳ ವಲಯದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ನಟಿ, ಮಗು ಜನಿಸಿದ ಕೇವಲ ಮೂರೇ ತಿಂಗಳಿನಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಳ್ಳುವ (Weight Loss) ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

90 ಕೆಜಿ ತಲುಪಿದ್ದ ತಮ್ಮ ತೂಕವನ್ನು ಇದೀಗ 65 ಕೆಜಿಗೆ ಇಳಿಸಿಕೊಂಡಿರುವ ಐಶ್ವರ್ಯಾ, ತಮ್ಮ ಈ ಅದ್ಭುತ ಬಾಡಿ ಟ್ರಾನ್ಸ್‌ಫಾರ್ಮೇಷನ್ ಸೀಕ್ರೆಟ್ ಅನ್ನು ಹಂಚಿಕೊಂಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಟಿ ಐಶ್ವರ್ಯಾ ಸಾಲೀಮಠ ಮತ್ತು ನಟ ವಿನಯ್ ದಂಪತಿ ಅವಳಿ ಗಂಡು ಮಕ್ಕಳಿಗೆ ಪೋಷಕರಾದರು. ತಮ್ಮ ಮಕ್ಕಳಿಗೆ 'ವಜ್ರ' ಮತ್ತು 'ವೈಡೂರ್ಯ' ಎಂದು ಹೆಸರಿಟ್ಟಿರುವ ಜೋಡಿ, ಇತ್ತೀಚೆಗಷ್ಟೇ ಕಿವಿ ಚುಚ್ಚಿಸುವ ಶಾಸ್ತ್ರವನ್ನು ನೆರವೇರಿಸಿ ಆ ವೀಡಿಯೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮಕ್ಕಳ ಜನನದ ಬಳಿಕ ನಟನೆಯಿಂದ ಬ್ರೇಕ್ ಪಡೆದಿರುವ ನಟಿ, ಮಕ್ಕಳ ಆರೈಕೆಯ ಜೊತೆಗೆ ನಿಧಾನವಾಗಿ ತಮ್ಮ ಫಿಟ್‌ನೆಸ್ ಕಡೆಗೂ ಗಮನ ಹರಿಸಲು ಶುರು ಮಾಡಿದ್ದಾರೆ.

ತಮ್ಮ ತೂಕ ಇಳಿಕೆಯ ಪ್ರಯಾಣದ ಬಗ್ಗೆ ಮಾಹಿತಿ ನೀಡಿರುವ ನಟಿ, ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಬಾಣಂತನದ ಅವಧಿಯಲ್ಲಿ ತಮ್ಮ ತೂಕ 90 ಕೆಜಿ ತಲುಪಿತ್ತು. ಆದರೆ ಸೂಕ್ತ ಡಯೆಟ್ ಹಾಗೂ ದಿನನಿತ್ಯದ ವಾಕಿಂಗ್ ಮೂಲಕ ಕೇವಲ ಮೂರು ತಿಂಗಳಲ್ಲಿ ತೂಕವನ್ನು 65 ಕೆಜಿಗೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಐಶ್ವರ್ಯಾ ಸಾಲೀಮಠ ಅವರ ಡಯೆಟ್ ಪ್ಲಾನ್ ಏನು?

ತಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವುದಾಗಿ ಐಶ್ವರ್ಯಾ ತಿಳಿಸಿದ್ದಾರೆ:

ಕಾರ್ಬೋಹೈಡ್ರೇಟ್ ಕಡಿತ: ಹಿಂದೆ ಚಪಾತಿ, ಅನ್ನ ಮತ್ತು ಸಾಂಬಾರ್‌ನಂತಹ ಕಾರ್ಬ್ಸ್ ಹೆಚ್ಚಿರುವ ಆಹಾರ ಸೇವಿಸುತ್ತಿದ್ದ ಅವರು, ಈಗ ಅದನ್ನು ಕಡಿಮೆ ಮಾಡಿದ್ದಾರೆ.

ಪ್ರೋಟೀನ್ ಮತ್ತು ಫೈಬರ್‌ಗೆ ಆದ್ಯತೆ: ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಂಶ ಹೆಚ್ಚಿರುವ ತರಕಾರಿ, ಹಣ್ಣು, ಮೊಟ್ಟೆ, ಪನೀರ್, ಮಶ್ರೂಮ್, ಬ್ರೊಕೊಲಿ, ಮೊಳಕೆ ಕಾಳಿನ ಪಲ್ಯ, ರಾಗಿ ಮುದ್ದೆ ಹಾಗೂ ಸೂಪ್‌ಗಳನ್ನು ಸೇರಿಸಿಕೊಂಡಿದ್ದಾರೆ.

ಸಾಕಷ್ಟು ನೀರು ಕುಡಿಯುವುದು: ತೂಕ ಇಳಿಕೆಯಲ್ಲಿ ನೀರು ಕುಡಿಯುವುದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಾಕಿಂಗ್: ಯಾವುದೇ ಕಠಿಣ ಕ್ರ್ಯಾಶ್ ಡಯೆಟ್ ಅಥವಾ ಜಿಮ್ ವರ್ಕೌಟ್ ಮಾಡದೇ, ಮನೆಯೂಟ ಹಾಗೂ ಪ್ರತಿದಿನದ ನಿಯಮಿತ ವಾಕಿಂಗ್‌ನಿಂದಲೇ ಈ ಬದಲಾವಣೆ ಸಾಧ್ಯವಾಗಿದೆ ಎಂದಿದ್ದಾರೆ.

"ತೂಕ ಇಳಿಸಿಕೊಳ್ಳುವುದಷ್ಟೇ ನನ್ನ ಗುರಿಯಲ್ಲ. ಮಕ್ಕಳಿಗೆ ಎದೆಹಾಲು ನೀಡುವುದರಿಂದ ಅವರ ಆರೋಗ್ಯಕ್ಕಾಗಿ ನಾನು ಪೌಷ್ಟಿಕಾಂಶಯುಕ್ತ ಆಹಾರವನ್ನು ಸರಿಯಾಗಿ ಸೇವಿಸಬೇಕು. ಸರಿಯಾದ ಡಯೆಟ್‌ನಿಂದಾಗಿ ಮಾನಸಿಕ ಆರೋಗ್ಯವೂ ಉತ್ತಮವಾಗಿದ್ದು, ಯಾವುದೇ ಮೂಡ್ ಸ್ವಿಂಗ್ಸ್ ಆಗುತ್ತಿಲ್ಲ" ಎಂದು ನಟಿ ಹೇಳಿದ್ದಾರೆ.

Topics