‘ಕೆಜಿಎಫ್ 2’ ಸಿನಿಮಾದ ಬೃಹತ್ ಯಶಸ್ಸಿನ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ನಟ ‘ರಾಕಿಂಗ್ ಸ್ಟಾರ್’ ಯಶ್, ತಮಗೆ ಸುಲಭವಾಗಿ ಕೋಟ್ಯಂತರ ರೂಪಾಯಿ ಹಣ ಹಾಗೂ ಖ್ಯಾತಿ ತಂದುಕೊಡಬಲ್ಲ ‘ಕೆಜಿಎಫ್ ಚಾಪ್ಟರ್ 3’ ಮಾಡದೆ, ಹೊಸ ಸಾಹಸಕ್ಕೆ ಕೈಹಾಕಿದ್ದೇಕೆ? ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.
ಖ್ಯಾತ ನಿರೂಪಕ ರಜತ್ ಶರ್ಮಾ ಅವರ ಪ್ರಸಿದ್ಧ ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಯಶ್ ಅವರ ಬಳಿ, "ಕೆಜಿಎಫ್ 2 ನಂತಹ ಹಿಟ್ ಸಿಕ್ಕ ಮೇಲೂ KGF 3 ಮಾಡಿ ಹಣಗಳಿಸದೆ, ಬೇರೆ ಸಿನಿಮಾ ಮಾಡುವ ರಿಸ್ಕ್ ಏಕೆ ತೆಗೆದುಕೊಂಡ್ರಿ?" ಎಂದು ಪ್ರಶ್ನಿಸಲಾಯಿತು.
ಇದಕ್ಕೆ ತಮ್ಮದೇ ಮಾಸ್ ಶೈಲಿಯಲ್ಲಿ ಉತ್ತರಿಸಿದ ಯಶ್, "ನನ್ನ ಸ್ವಂತ ಮನೆ ಬಿಟ್ಟು ಗಾಂಧಿನಗರದ ಚಿತ್ರರಂಗಕ್ಕೆ ಬಂದೆನಲ್ಲ, ಅದಕ್ಕಿಂತ ದೊಡ್ಡ ರಿಸ್ಕ್ ನನಗೆ ಬೇರೊಂದಿಲ್ಲ. ಅಪಾಯಗಳ ನಡುವೆ ರಿಸ್ಕ್ ತೆಗೆದುಕೊಂಡು ಜೀವನ ನಡೆಸುವುದ ಎಂದರೆ ನನಗೆ ತುಂಬಾ ಇಷ್ಟ," ಎಂದು ಖಡಕ್ ಆಗಿ ಹೇಳಿದರು.
ಯಶ್ ಅವರ ಈ ಉತ್ತರಕ್ಕೆ ಪ್ರೇಕ್ಷಕರಿಂದ ಭಾರಿ ಚಪ್ಪಾಳೆ ಹಾಗೂ ಮೆಚ್ಚುಗೆ ವ್ಯಕ್ತವಾಯಿತು. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳನ್ನು ಮಾಡಬೇಕು ಎಂಬುದು ಯಶ್ ಅವರ ಮುಖ್ಯ ಗುರಿ. ‘ರಾಕಿ’ ಪಾತ್ರದ ಇಮೇಜ್‌ನಿಂದ ಹೊರಬಂದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಅವರು ಬಯಸಿದ್ದಾರೆ.
ಪ್ರಸ್ತುತ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ.