ಅದೊಂದು ಕಾಲವಿತ್ತು ಹಬ್ಬ, ವಿಶೇಷ ದಿನಗಳಲ್ಲಿ ಮಾಡುವ ಸಿಹಿ ಅಡುಗೆಗಳಿಗೆ ಮಾತ್ರ ದ್ರಾಕ್ಷಿ, ಗೋಡಂಬಿ, ಬಾದಾಮಿಗಳು ಬಳಕೆಯಾಗುತ್ತಿತ್ತು. ಸಾಮಾನ್ಯ ದಿನಗಳಲ್ಲಿ ಅವುಗಳೆಲ್ಲವನ್ನು ಡಬ್ಬದಲ್ಲಿ ಮುಚ್ಚಿಡಲಾಗುತ್ತಿತ್ತು. ಯಾರೂ ಅದನ್ನು ಅಷ್ಟಾಗಿ ತಿನ್ನುವುದಕ್ಕೆ ಹೋಗುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ, ಆಹಾರ, ಡಯಟ್ಗಳ ಬಗ್ಗೆ ತಿಳಿಯುತ್ತಿದ್ದಂತೆ ಇವುಗಳಲ್ಲಿರುವ ಅಗಾಧ ಪೋಷಕಾಂಶಗಳು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗ ಎಂಬುದು ತಿಳಿದುಕೊಂಡ ಮೇಲೆ, ಒಣ ಹಣ್ಣು ಮತ್ತು ಬೀಜಗಳು ಆಹಾರದ ಭಾಗವಾಯಿತು. ಡಯಟ್ ಚಾರ್ಟ್ಗಳಲ್ಲಿ ಸ್ಥಾನ ಪಡೆದುಕೊಂಡವು. ಬಾದಾಮಿ, ಗೋಡಂಬಿ, ವಾಲ್ನಟ್, ಖರ್ಜೂರ, ಪಿಸ್ತಾ, ದ್ರಾಕ್ಷಿ, ಅಂಜೂರ ಮುಂತಾದವುಗಳು ಪ್ರೋಟೀನ್, ಉತ್ತಮ ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ, ಇವು ಖಂಡಿತ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ ಎಂದು ಆಹಾರ ತಜ್ಞರು ಸಲಹೆಗಳನ್ನು ಸಹ ನೀಡಿದ್ದಾರೆ. ಆದರೆ ಇವುಗಳು ಅತಿ ರುಚಿಯಾಗಿರುವುದರಿಂದ ಕೆಲವರು ಮಿತಿ ಮೀರಿ ತಿನ್ನುತ್ತಿದ್ದಾರೆ. ಇದರಿಂದ ದೇಹಕ್ಕೆ ಲಾಭವಾಗುವುದರ ಬದಲಿಗೆ ನಷ್ಟವಾಗುತ್ತದೆ. ಅತಿಯಾದರೆ ಅಮೃತವೂ ವಿಷವೆಂಬಂತೆ ಅಗಾಧ ಪೋಷಕಾಂಶಗಳಿರುವ ಒಣ ಹಣ್ಣು ಮತ್ತು ಬೀಜಗಳನ್ನು ಅತಿಯಾಗಿ ಸೇವಿಸದರೆ ಹೊಟ್ಟೆಯುಬ್ಬುರ, ಜೀರ್ಣಕಾರಿ ಸಮಸ್ಯೆ, ದೇಹದಲ್ಲಿ ಉಷ್ಣತೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಅದು ಹೇಗೆ? ಇಲ್ಲಿದೆ ಓದಿ.
ಒಣ ಹಣ್ಣು ಮತ್ತು ಬೀಜಗಳಲ್ಲೇನಿದೆ?
ಒಣ ಹಣ್ಣು ಮತ್ತು ಬೀಜಗಳಲ್ಲಿ ಅಗಾಧ ಪೋಷಕಾಂಶಗಳಿವೆ. ಆದರೆ ಇದರ ಜೊತೆಗೆ ಫೈಟಿಕ್ ಆಮ್ಲವೂ ಸೇರಿದೆ. ಅವುಗಳನ್ನು ಅತಿಯಾಗಿ ಸೇವಿಸಿದಾಗ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣ ಸಮಸ್ಯೆ, ಹೊಟ್ಟೆ ನೋವು, ಮೊಡವೆ, ದೇಹದ ಉಷ್ಣತೆಯಲ್ಲಿ ಹೆಚ್ಚಳ, ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಒಣ ಹಣ್ಣು ಮತ್ತು ಬೀಜಗಳನ್ನು ತಿನ್ನುವ ಸರಿಯಾದ ಕ್ರಮ ಯಾವುದು
ಒಣ ಹಣ್ಣು ಮತ್ತು ಬೀಜಗಳನ್ನು ದಿನವೊಂದಕ್ಕೆ ಸುಮಾರು 20 ರಿಂದ 30 ಗ್ರಾಂ ಸೇವಿಸಲು ಸೂಚಿಸಲಾಗುತ್ತದೆ. ಒಣ ಹಣ್ಣು ಮತ್ತು ಬೀಜಗಳನ್ನು ನೇರವಾಗಿ ತಿನ್ನುವ ಬದಲು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಅವುಗಳಲ್ಲಿರುವ ಫೈಟಿಕ್ ಆಮ್ಲ ಕಡಿಮೆಯಾಗಿ, ಪೋಷಕಾಂಶಗಳು ದೇಹಕ್ಕ ಸುಲಭವಾಗಿ ಲಭ್ಯವಾಗುತ್ತವೆ.
ಇದನ್ನೂ ಓದಿ: ಬಿಳಿ ಕೂದಲು ಕಪ್ಪಾಗಲು ಮನೆಮದ್ದು; ರಾಸಾಯನಿಕ ಬಣ್ಣಗಳಿಗೆ ಇನ್ಮುಂದೆ ಗುಡ್ ಬೈ ಹೇಳಿ!
ಇದನ್ನು ಗಮನಿಸಿ
ಒಣ ಹಣ್ಣು ಮತ್ತು ಬೀಜಗಳನ್ನು ತಜ್ಞರು ಸಲಹೆ ನೀಡಿದಂತೆ ತಿನ್ನುವುದರಿಂದ ದೇಹಕ್ಕೆ ಪೋಷಕಾಂಶಗಳು ಸಿಗುತ್ತವೆ. ಮಿತವಾಗಿ, ಸರಿಯಾದ ಕ್ರಮದಲ್ಲಿ ಸೇವಿಸಿದರೆ ಸಂಪೂರ್ಣವಾಗಿ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಮಧುಮೇಹ, ಅಧಿಕ ತೂಕ ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ತಜ್ಞರ ಸಲಹೆಯ ಮೇರೆಗೆ ತಿನ್ನುವದು ಸೂಕ್ತ.
