ರಾತ್ರಿ ಊಟದ ನಂತರ ಹಣ್ಣು ತಿನ್ನೋದ್ರಿಂದ ನಿಮಗೆ ಆರೋಗ್ಯ ಸಮಸ್ಯೆ ಕಾಡ್ತಾ ಇದ್ಯಾ ? ಈ ಪ್ರಶ್ನೆಗೆ ತಜ್ಞರ ಸಲಹೆ ಹೀಗಿದೆ..!

ಕೆಲವರಿಗೆ ರಾತ್ರಿ ಊಟದ ನಂತರ ಹಣ್ಣು ತಿಂದ್ರೆ ಹೊಟ್ಟೆಯುಬ್ಬರ, ಎಸಿಡಿಟಿ, ಅಜೀರ್ಣ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಹಣ್ಣುಗಳಲ್ಲಿದೆಯೇ ಅಥವಾ ಸಮಯದಲ್ಲಿದೆಯೇ? ತಜ್ಞರ ಸಲಹೆ ಇಲ್ಲಿದೆ ಓದಿ.

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಚಾರ. ದಿನವೊಂದಕ್ಕೆ ಅಗತ್ಯವಿರುವ ಅತಿ ಮುಖ್ಯ ಪೋಷಕಾಂಶಗಳನ್ನು ಈ ಹಣ್ಣುಗಳು ಪೂರೈಸುತ್ತವೆ. ಸಾಮಾನ್ಯವಾಗಿ ಹಣ್ಣುಗಳನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ತಿನ್ನಲಾಗುತ್ತದೆ. ಕೆಲವರು ಬೆಳಿಗ್ಗೆ ಹಣ್ಣನ್ನು ತಿಂದರೆ, ಇನ್ನು ಕೆಲವರು ಲಘು ಉಪಹಾರದಲ್ಲಿ ತಿನ್ನುತ್ತಾರೆ. ಅದೇ ರೀತಿ ರಾತ್ರಿಯ ಊಟದ ನಂತರ ಹಣ್ಣನ್ನು ತಿನ್ನುವವರೂ ಇದ್ದಾರೆ. ಆದರೆ ರಾತ್ರಿ ಊಟದ ನಂತರ ತಕ್ಷಣ ಹಣ್ಣುಗಳನ್ನು ತಿನ್ನುವ ಅಭ್ಯಾಸವು ಕೆಲವರಿಗೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಕೆಲವು ಹಣ್ಣುಗಳನ್ನು ತಿಂದಾಗ ಅತಿಯಾದ ಹೊಟ್ಟೆಯುಬ್ಬರ, ಅಸಮರ್ಪಕ ಜೀರ್ಣಕ್ರಿಯೆ, ಹೊಟ್ಟೆ ಭಾರ ಮುಂತಾದ ಅಸ್ವಸ್ಥತೆಯುಂಟಾಗುತ್ತದೆ. ಹಾಗಾದರೆ ರಾತ್ರಿ ಊಟದ ನಂತರ ಹಣ್ಣುಗಳನ್ನು ತಿನ್ನಲೇಬಾರದೇ? ಆಹಾರ ತಜ್ಞರು ಹೇಳುವುದೇನು? ಇಲ್ಲಿದೆ ಓದಿ.

ಸಮಯ ಬಹಳ ಮುಖ್ಯ

ಸಮಸ್ಯೆ ಹಣ್ಣುಗಳಲಿಲ್ಲ, ಬದಲಿಗೆ ಅವುಗಳನ್ನು ಸೇವಿಸುವ ಸಮಯದಲ್ಲಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಹಣ್ಣುಗಳು ಕೊಬ್ಬು ಮತ್ತು ಪ್ರೋಟೀನ್‌ಗಳಿಗಿಂತ ಬೇಗ ಜೀರ್ಣವಾಗುವುದೇನೋ ನಿಜ. ಆದರೆ ಭಾರಿ ಊಟದ ನಂತರ ಅವುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಐಬಿಎಸ್, ಎಸಿಡಿಟಿ, ದುರ್ಬಲ ಜೀರ್ಣಕ್ರಿಯೆ ಅಥವಾ ಇತರ ಕರುಳಿನ ಸಮಸ್ಯೆಗಳಿರುವ ಜನರು ರಾತ್ರಿಯ ಊಟದ ನಂತರ ಹಣ್ಣುಗಳನ್ನು ಸೇವಿಸಿದರೆ ಹೆಚ್ಚಿನ ಪ್ರಮಾಣದ ಉದರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತಹವರು ಹಣ್ಣುಗಳನ್ನು ತಿನ್ನಲು ರಾತ್ರಿಯ ಬದಲಿಗೆ ಬೇರೆ ಸಮಯ ನಿಗದಿಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನಲು ಬೆಳಗ್ಗಿನ ಸಮಯ ಅಥವಾ ಖಾಲಿ ಹೊಟ್ಟೆ ಉತ್ತಮ. ಆ ಸಮಯದಲ್ಲಿ ಜೀರ್ಣಕ್ರಿಯೆ ವೇಗವಾಗಿರುವುದರಿಂದ ಹಣ್ಣುಗಳಲ್ಲಿನ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ.

ಇದನ್ನೂ ಓದಿ: ಒಣ ಹಣ್ಣು ಮತ್ತು ಬೀಜಗಳ ಅತಿ ಸೇವನೆಯೂ ಹಾನಿಕಾರಕ : ತಜ್ಞರ ಈ ಸಲಹೆ ತಿಳಿದುಕೊಳ್ಳಿ

ಊಟದ ಸಮಯ ಬದಲಾಯಿಸಿ

ನೀವು ನಿಮ್ಮ ರಾತ್ರಿಯ ಊಟವನ್ನು ಹಗುರವಾಗಿ ಮಾಡಿದ್ದರೆ, ಹಣ್ಣುಗಳನ್ನು ತಿನ್ನುವುದರಿಂದ ಅಂತಹ ದೊಡ್ಡ ಸಮಸ್ಯೆಯೇನೂ ಆಗಲಾರದು. ಕಡಿಮೆ ಆಮ್ಲೀಯ ಹಣ್ಣುಗಳನ್ನು ತಿಂದರೆ ಜೀರ್ಣಾಂಗ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ. ನಾವು ಊಟದಲ್ಲಿ ಹಲವು ರೀತಿಯ ಆಹಾರಗಳನ್ನು ತಿನ್ನುತ್ತೇವೆ. ಅವುಗಳಲ್ಲಿ ಪ್ರೋಟೀನ್‌, ಕೊಬ್ಬು ಮಂತಾದ ಜೀವಸತ್ವಗಳು ಇರುತ್ತವೆ. ಪ್ರತಿಯೊಂದನ್ನು ಜೀರ್ಣಿಸಲು ಹೊಟ್ಟೆಗೆ ನಿರ್ದಿಷ್ಟ ಸಮಯಗಳು ಬೇಕು. ಆ ಸಮಯದ ಒಳಗೇ ಮತ್ತೆ ಆಹಾರವನ್ನು ಹೊಟ್ಟೆಗೆ ಸೇರಿಸಿದಾಗ ಹೊಟ್ಟೆಯುಬ್ಬರ, ಎಸಿಡಿಟಿ, ಹೊಟ್ಟೆ ಭಾರ ಕೊನೆಗೆ ಅಜೀರ್ಣ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ತಜ್ಞರು ಹೇಳುವ ಪ್ರಕಾರ ಹಣ್ಣುಗಳನ್ನು ರಾತ್ರಿ ತಿನ್ನುವುದಾದರೆ ನಿಮ್ಮ ರಾತ್ರಿ ಊಟವನ್ನು ಮೊದಲೇ ಮಾಡಿ. 7 ರಿಂದ 8 ಗಂಟೆಯ ಒಳಗೆ. ನಂತರ ಸುಮಾರು ಒಂದು ಅಥವಾ ಒಂದೂವರೆ ಗಂಟೆಯ ನಂತರ ಹಣ್ಣು ತಿನ್ನಬಹುದು ಎಂದು ಸಲಹೆ ನೀಡುತ್ತಾರೆ. ಹಣ್ಣುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ, ಆದರೆ ಅವುಗಳನ್ನು ತಿನ್ನುವ ಸಮಯಕ್ಕೆ ವಿಶೇಷ ಗಮನ ಹರಿಸಬೇಕು. ಆಗ ಮಾತ್ರ ಹಣ್ಣಿನಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸುಲಭವಾಗಿ ಸೇರುತ್ತವೆ.

Exit mobile version