ಆರೋಗ್ಯವಂತ ದೇಹ ಇಂದಿನ ದಿನಗಳ ಬಹು ದೊಡ್ಡ ಸವಾಲು. ಅದಕ್ಕಾಗಿ ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಪ್ರತಿದಿನ ಜಿಮ್‌ನಲ್ಲಿ ಗಂಟೆಗಟ್ಟಲೆ ವ್ಯಾಯಾಮ ಮಾಡಿ ಬೆವರಿಳಿಸುವವರು ಇದ್ದಾರೆ. ಇವೆಲ್ಲ ಮಾಡಿದರೂ ಕೆಲವೊಮ್ಮೆ ನಿರೀಕ್ಷಿಸಿದ ಫಲಿತಾಂಶ ಮಾತ್ರ ಮರೀಚಿಕೆ. ಫಿಟ್ ಆಗಿರುವುದರ ಅರ್ಥ ಕಠಿಣ ವ್ಯಾಯಾಮ ಮಾಡುವುದೆಂದಲ್ಲ. ಸಮತೋಲಿತ ಆಹಾರ, ಸಾಕಷ್ಟು ವಿಶ್ರಾಂತಿ ಮತ್ತು ವ್ಯಾಯಾಮದ ಸರಿಯಾದ ಯೋಜನೆ ಮುಂತಾದ ಸರಳ ಯೋಜನೆಗಳು ಬಹಳ ಮುಖ್ಯ. ಆಗ ಫಿಟ್ನೆಸ್ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು ಎಂದು ತಜ್ಞರು ಹೇಳುತ್ತಾರೆ. ದೇಹಕ್ಕೆ ವಿಶ್ರಾಂತಿ ನೀಡುವುದು ಪ್ರತಿದಿನ ಕಠಿಣ ವ್ಯಾಯಾಮ ಮಾಡುವಷ್ಟೇ ಮುಖ್ಯ. ವ್ಯಾಯಾಮದ ನಂತರ ವಿಶ್ರಾಂತಿಯ ಸಮಯದಲ್ಲಿ ಸ್ನಾಯುಗಳು ಚೇತರಿಸಿಕೊಳ್ಳುತ್ತವೆ ಮತ್ತು ಬಲಗೊಳ್ಳುತ್ತವೆ. ಅತಿಯಾದ ವ್ಯಾಯಾಮವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅದಕ್ಕಾಗಿಯೇ ವಾರದಲ್ಲಿ ನಾಲ್ಕು ದಿನ ತೀವ್ರವಾದ ವ್ಯಾಯಾಮ ಮಾಡಲು ಮತ್ತು ಉಳಿದ ದಿನಗಳಲ್ಲಿ ವಿಶ್ರಾಂತಿ ಪಡೆಯುವ ನಿಯಮವನ್ನು ಸೂಚಿಸಲಾಗುತ್ತದೆ. ಹಾಗಾದರೆ ದೇಹ ಫಿಟ್ ಆಗಿರಲು ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು ನೋಡೋಣ.
ಹೀಗಿರಲಿ ನಿಮ್ಮ ವ್ಯಾಯಾಮ
ತೂಕ ಇಳಿಸಿಕೊಳ್ಳಲು ದೀರ್ಘಕಾಲ ಕಾರ್ಡಿಯೋ ಮಾಡುವ ಬದಲಿಗೆ ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಲಘು ವ್ಯಾಯಾಮದಿಂದ ಪ್ರಾರಂಭಿಸಿ ಕಠಿಣ ವ್ಯಾಯಾಮ ಮಾಡಿ. ಜೊತೆಗೆ ಪ್ರತಿದಿನ ವಾಕಿಂಗ್ ತಪ್ಪಿಸಬೇಡಿ. ಏಕೆಂದರೆ ನಡಿಗೆ ದೇಹಕ್ಕೆ ಹೆಚ್ಚು ಪ್ರಯೋಜನಕಾರಿ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ, ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ಸುಧಾರಿಸತ್ತದೆ. ಋತುಚಕ್ರಕ್ಕೆ ಅನುಗುಣವಾಗಿ ಮಹಿಳೆಯರಲ್ಲಿ ಹಾರ್ಮೋನ್‌ಗಳ ವ್ಯಾತ್ಯಾಸ ಕಂಡುಬರುತ್ತದೆ. ಅದಕ್ಕೆ ತಕ್ಕಂತೆ ವ್ಯಾಯಾಮಗಳನ್ನು ಮಾಡಿ. ಉಳಿದ ದಿನಗಳಲ್ಲಿ ಕಠಿಣ ವ್ಯಾಯಮ ಮಾಡಬಹುದು. ಹೆಚ್ಚು ಆಯಾಸವಾದ ದಿನಗಳಲ್ಲಿ ವ್ಯಾಯಾಮ ಮಾಡಲು ಹೋಗಬೇಡಿ. ಹಗುರ ವ್ಯಾಯಾಮ ಮಾಡಿ, ಸಾಕಷ್ಟು ವಿಶ್ರಾಂತಿ ಪಡೆಯಿರಿ. ದೇಹವನ್ನು ಆಂತರಿಕವಾಗಿ ಸುಧಾರಿಸಲು ವಿಶ್ರಾಂತಿ ಅತ್ಯಗತ್ಯ.
ಇದನ್ನೂ ಓದಿ : ರಾತ್ರಿ ಮಾತ್ರ ಮೂಗು ಬ್ಲಾಕ್ ಆಗುತ್ತಾ? ಈ 5 ತಪ್ಪುಗಳೇ ಅದಕ್ಕೆ ಕಾರಣ!
ಹೀಗಿರಲಿ ಆಹಾರಕ್ರಮ
ವ್ಯಾಯಾಮದ ಜೊತೆಗೆ ಆಹಾರವೂ ಅತಿ ಮುಖ್ಯ. ಹಾಗಾಗಿ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಸೇವಿಸುವುದು ಬಹಳ ಮುಖ್ಯ. ಸ್ನಾಯುಗಳ ನಿರ್ಮಾಣ ಮತ್ತು ಚಯಾಪಚಯ ಕ್ರಿಯೆಗೆ ಪ್ರೋಟೀನ್ ಅವಶ್ಯಕ. ಅದಕ್ಕಾಗಿ ತಜ್ಞರು ಪ್ರತಿ ಊಟದಲ್ಲೂ ಪ್ರೋಟೀನ್ ಭರಿತ ಆಹಾರ ಸೇವಿಸಲು ಸಲಹೆ ನೀಡುತ್ತಾರೆ. ಉತ್ತಮ ಫಿಟ್ನೆಸ್‌ಗಾಗಿ ಕೇವಲ ವ್ಯಾಯಾಮ ಮಾಡಿದರೆ ಸಾಕಾಗುವುದಿಲ್ಲ. ಹಾರ್ಮೋನ್ ಬದಲಾವಣೆಗೆ ಅನುಗುಣವಾಗಿ ಆಹಾರ ಪದ್ಧತಿ, ವ್ಯಾಯಾಮ ಅಳವಡಿಸಿಕೊಳ್ಳುವುದರಿಂದ ಫಿಟ್ನೆಸ್ ಗುರಿಯನ್ನು ಸುಲಭವಾಗಿ ಸಾಧಿಸಬಹುದು.
