ಬಾಯಿ ಹುಣ್ಣು, ಪ್ರತಿಯೊಬ್ಬರನ್ನೂ ವರ್ಷದಲ್ಲಿ ಒಮ್ಮೆಯಾದರೂ ಕಾಡುವ ಸಾಮಾನ್ಯ ಕಾಯಿಲೆ. ಇದಕ್ಕ ವಯಸ್ಸಿನ ಮಿತಿಯಿಲ್ಲ. ಆಬಾಲವೃದ್ಧರಿಗೂ ನೋವುಣಿಸುತ್ತದೆ. ಬಾಯಿಯ ಒಳಗಡೆ ಆಗುವ ಚಿಕ್ಕ ಗಾಯವಾದರೂ ಇದು ಕೊಡುವ ನೋವು ಮಾತ್ರ ಅಸಾಧಾರಣ. ಊಟ, ತಿಂಡಿ ಅಷ್ಟೇ ಯಾಕೆ ನೀರು ಕುಡಿಯಲು ಸಾಧ್ಯವಾಗದಷ್ಟು ನೋವನ್ನು ನೀಡುತ್ತದೆ. ಕೆಲವೊಮ್ಮೆ ಮಾತನಾಡುವುದು ಕಷ್ಟವಾಗಬಹುದು. ಸಾಮಾನ್ಯವಾಗಿ ಕೆನ್ನೆಯ ಒಳಭಾಗ, ತುಟಿ, ಒಸಡು, ನಾಲಿಯೆ ಒಳಭಾಗದಲ್ಲಿ ಕಾಣಿಸುವ ಬಾಯಿ ಹುಣ್ಣು ಒಂದು ಅಥವಾ ಎರಡು ವಾರಗಳಲ್ಲಿ ಮಾಯವಾಗಿಬಿಡುತ್ತದೆ. ಆದರೆ ಪದೇ ಪದೇ ಬಾಯಿ ಹುಣ್ಣಾದರೆ ಅದು ಅನಾರೋಗ್ಯದ ಸಂಕೇತವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಹೀಗಿರುವಾಗ ಈ ಬಾಯಿ ಹುಣ್ಣು ಕಾಣಿಸಿಕೊಳ್ಳಲು ಕಾರಣವೇನು? ಇದಕ್ಕೆ ಯಾವುದಾದರೂ ಸುಲಭದ ಪರಿಹಾರವಿದೆಯೇ? ಎಂಬ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.
ಬಾಯಿ ಹುಣ್ಣಿಗೆ ಕಾರಣಗಳೇನು?
ನಮ್ಮ ಜೀರ್ಣಾಂಗ ವ್ಯವಸ್ಥೆ ಪ್ರಾರಂಭವಾಗುವುದೇ ಬಾಯಿಯಿಂದ. ಬಾಯಿಯ ಆರೋಗ್ಯ ಕರುಳಿನ ಆರೋಗ್ಯದ ಕನ್ನಡಿ ಎಂದು ಹೇಳಲಾಗುತ್ತದೆ. ನಮ್ಮ ಕರುಳು ನಾವು ತಿಂದ ಆಹಾರವನ್ನು ಜೀರ್ಣಿಸಿ, ಪೋಷಕಾಂಶಗಳನ್ನು ದೇಹದ ಭಾಗಗಳಿಗೆ ರವಾನಿಸುವ ಕೆಲಸ ಮಾಡುತ್ತದೆ. ಪೋಷಕಾಂಶಗಳ ಕೊರತೆಯಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಮತ್ತು ಬಾಯಿಯ ಅಂಗಾಂಶಗಳು ಹಾನಿಗೊಳಗಾಗುತ್ತವೆ. ಇದು ಆಗಾಗ ಬಾಯಿ ಹುಣ್ಣು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಇದಿಷ್ಟೇ ಅಲ್ಲದೇ ಬಾಯಿ ಹುಣ್ಣಿಗೆ ಮಾನಸಿಕ ಒತ್ತಡ, ಅಸಮರ್ಪಕ ನಿದ್ದೆ, ಆತಂಕ, ಕೆಲಸದ ಒತ್ತಡಗಳು ಕಾರಣವಾಗಿದೆ. ಕೆಲವೊಮ್ಮೆ ಆಕಸ್ಮಿಕವಾಗಿ ಬಾಯಿಯ ಒಳಭಾಗ ಕಚ್ಚಲ್ಪಡುತ್ತದೆ, ಹಲ್ಲುಗಳ ಚೂಪಾದ ಅಂಚು ತಾಗುವುದು, ಗಟ್ಟಿಯಾಗಿ ಹಲ್ಲುಜ್ಜುವುದು, ಮುಂತಾದವುಗಳಿಂದಲೂ ಬಾಯಿಯ ಸೂಕ್ಷ ಅಂಗಾಂಶಗಳು ಹಾನಿಯಾಗಿ ಬಾಯಿ ಹುಣ್ಣಿನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಕೆಲವು ಮಸಾಲೆ ಪದಾರ್ಥಗಳು, ಅತಿ ಹುಳಿ ಮತ್ತು ಬಿಸಿ ಆಹಾರಗಳು, ಪಾನೀಯಗಳು ಸಹ ಈ ಸಮಸ್ಯೆಯನ್ನು ಹೆಚ್ಚಿಸಬಹುದು. ಕೆಲವೊಮ್ಮೆ ಹಾರ್ಮೋನ್ ಬದಲಾವಣೆಯಿಂದಲೂ ಆಗಬಹುದು. ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಬಾಯಿ ಹುಣ್ಣು ಬರುವ ಸಾಧ್ಯತೆಯಿದೆ.
ಬಾಯಿ ಹುಣ್ಣಿಗೆ ಪರಿಹಾರವೇನು?
* ಬಾಯಿ ಹುಣ್ಣು ಸಂಪೂರ್ಣವಾಗಿ ಬರದೇ ಇರುವಂತೆ ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
* ಕಬ್ಬಿಣ, ವಿಟಮಿನ್ ಬಿ12, ಫೋಲಿಕ್ ಎಸಿಡ್ ಮತ್ತು ಸತು ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ.
* ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ನೀರಿನ ಕೊರತೆಯಿಂದಲೂ ಕೆಲವೊಮ್ಮೆ ಬಾಯಿ ಹುಣ್ಣು ಉಂಟಾಗುತ್ತದೆ.
* ಬಾಯಿಯ ನೈರ್ಮಲ್ಯಕ್ಕೆ ಒತ್ತು ಕೊಡಿ. ಪ್ರತಿದಿನ ಹಲ್ಲುಜ್ಜುವುದು, ಆಹಾರ ಸೇವನೆಯ ನಂತರ ಬಾಯಿಯನ್ನು ಸ್ವಚ್ಛಗೊಳಿಸುವುದು, ಹಲ್ಲು ಮತ್ತು ಒಸಡಿನ ಸಮಸ್ಯೆಯಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.
* ಬಾಯಿ ಹುಣ್ಣು ಆದಾಗ ಉಗುರ ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಗಾರ್ಗಲ್ ಮಾಡಿ.
* ಮಾನಸಿಕ ಒತ್ತಡ ಮತ್ತು ಆತಂಕ ನಿವಾರಣೆಗೆ ಪ್ರತಿದಿನ ಧ್ಯಾನ, ನಿಯಮಿತ ವ್ಯಾಯಾಮ ಮಾಡಿ.
* ಪ್ರತಿದಿನ 7 ರಿಂದ 8 ಗಂಟೆಯ ನಿದ್ದೆ ಮಾಡಿ.
* ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಬಾಯಿ ಹುಣ್ಣಾದರೆ, ಆಗ ತಜ್ಞ ವೈದ್ಯರನ್ನು ಸಂಪರ್ಕಿಸಿ.
