Kannada News Next

lifestyle

ಹೊಟ್ಟೆಯುಬ್ಬರ ಸಮಸ್ಯೆಗೆ ಪರಿಹಾರ ಬೆಳಗ್ಗಿನ ಉಪಹಾರ ! ಹೀಗಿರಲಿ ನಿಮ್ಮ ಬೆಳಗ್ಗಿನ ತಿಂಡಿಯ ಪ್ಲೇಟ್‌ !

ಹೊಟ್ಟೆಯುಬ್ಬರ ಸಮಸ್ಯೆಗೆ ಪರಿಹಾರವೇನು ಎಂದು ಚಿಂತಿಸುವ ಬದಲಿಗೆ ನಿಮ್ಮ ಬೆಳಗ್ಗಿನ ಉಪಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಈ ಸಿಂಪಲ್ ಟಿಪ್ಸ್‌ ಪಾಲಿಸಿ...

By Archana V Bhat | ಅರ್ಚನಾ ವಿ ಭಟ್‌
Photo: AI

ಸುಮಾರು ಎಂಟು ಗಂಟೆಗಳ ಸುದೀರ್ಘ ನಿದ್ದೆ ನಂತರ ನಮ್ಮ ಹೊಟ್ಟೆ ಸೇರುವ ಮೊದಲ ಆಹಾರ ಬೆಳಗಿನ ಉಪಹಾರ. ಇದು ದಿನದ ಮೊದಲ ಊಟ. ದಿನವಿಡೀ ಉತ್ಸಾಹದಿಂದಿರಲು ಸಹಾಯ ಮಾಡುವ ಶಕ್ತಿ ವರ್ಧಕ. ಬೆಳಗ್ಗಿನ ತಿಂಡಿ ಸರಿಯಾಗಿದ್ದರೆ ಮಾಡುವ ಕೆಲಸದಲ್ಲಿ ಶಕ್ತಿಯ ಕೊರತೆ ಕಾಣಿಸುವುದಿಲ್ಲ. ಆದರೆ ಕೆಲವೊಮ್ಮೆ ಬೆಳಗ್ಗೆ ಸೇವಿಸುವ ಉಪಹಾರ ಜೀರ್ಣವಾಗದೇ ಹೊಟ್ಟೆಯುಬ್ಬರ ಸಮಸ್ಯೆಗೆ ಕಾರಣವಾಗುತ್ತದೆ. ಬೆಳಗ್ಗೆ ತಿಂದ ತಿಂಡಿಯನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ಬಹಳ ಸಮಯ ತಗುಲಿದಾಗ ಈ ಉಬ್ಬುವಿಕೆಯುಂಟಾಗುತ್ತದೆ. ಏಕೆಂದರೆ ಕೆಲವು ಆಹಾರಗಳನ್ನು ಜೀರ್ಣಿಸಲು ಹೆಚ್ಚಿನ ಸಮಯದ ಅವಶ್ಯಕತೆಯಿರುತ್ತದೆ. ಅದನ್ನು ಜೀರ್ಣಿಸಲು ದೇಹ ಹೆಚ್ಚೆಚ್ಚು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅದು ಹೊಟ್ಟೆಯುಬ್ಬರ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಬೆಳಗ್ಗಿನ ಉಪಹಾರದಲ್ಲಿ ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಆಹಾರಗಳನ್ನು ಸೇವಿಸುವುದು. ಜೀರ್ಣಾಂಗ ವ್ಯವಸ್ಥೆಯ ಮೇಲೆ ಕಡಿಮೆ ಒತ್ತಡವುಂಟಾಗುವಂತಹ ಬೆಳಗ್ಗಿನ ಉಪಹಾರದ ಪಟ್ಟಿ ಇಲ್ಲಿದೆ ಓದಿ.

ಚಿಯಾ ಬೀಜ ಮತ್ತು ಓಟ್ಸ್‌

ಚಿಯಾ ಬೀಜ ಮತ್ತು ಬೆರಿ ಹಣ್ಣಿನಿಂದ ತಯಾರಿಸಿದ ಓಟ್ಸ್‌ ಹೊಟ್ಟೆಯುಬ್ಬರವನ್ನು ತಡೆಗಟ್ಟಲು ಉತ್ತಮ ಆಯ್ಕೆ. ಓಟ್ಸ್‌ ಮತ್ತು ಚಿಯಾ ಬೀಜಗಳಲ್ಲಿ ಫೈಬರ್‌ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದೆ.

ಮೊಟ್ಟೆ ಮತ್ತು ಬ್ರೆಡ್‌

ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ ಮತ್ತು ಬ್ರೆಡ್‌ (ಮೈದಾ ಇರದ) ನಿಂದ ತಯಾರಿಸದ ಉಪಹಾರವೂ ಜೀರ್ಣಕಾರಿ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ಈ ತಿಂಡಿಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾಗಿದೆ.

ಪ್ಲೇನ್‌ ದೋಸೆ

ನೆನೆಸಿದ ಅಕ್ಕಿ ಮತ್ತು ಬೇಳೆಯಿಂದ ದೋಸಾ ಹಿಟ್ಟನ್ನು ತಯಾರಿಸಿ, ರಾತ್ರಿಯಿಡಿ ಹುದುಗಿಸಿ ಬೆಳಿಗ್ಗೆ ಅದರಿಂದ ದೋಸಾ ಮಾಡಿ ತಿನ್ನುವುದು ಕೂಡಾ ಹೊಟ್ಟೆಯುಬ್ಬರ ಸಮಸ್ಯೆಯನ್ನು ದೂರಮಾಡುತ್ತದೆ.

ಗ್ರೀಕ್‌ ಯೊಗಾರ್ಟ್‌

ಗ್ರೀಕ್‌ ಯೊಗಾರ್ಟ್‌ಗೆ ಸ್ಟ್ರಾಬೆರಿ ಮತ್ತು ಕೆಲವು ಹಣ್ಣಗಳನ್ನು ಸೇರಿಸಿ ತಿನ್ನಿರಿ. ಲ್ಯಾಕ್ಟೋಸ್‌ ಅನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದವರಿಗೆ ಗ್ರೀಕ್‌ ಯೋಗಾರ್ಟ್‌ ಉತ್ತಮವಾಗಿದೆ. ಇದರ ಜೊತೆಗೆ ಚಿಯಾ ಬೀಜಗಳು, ಬಾಳೆಹಣ್ಣು, ವಾಲ್ನಟ್ ಹಾಗೂ ಓಟ್‌ಮೀಲ್‌ಗಳು ಸಹ ಉತ್ತಮವಾಗಿದೆ.

ಪಾಲಕ್‌ ಮತ್ತು ಮೊಟ್ಟೆ

ಪಾಲಕ್ ಮತ್ತು ಮೊಟ್ಟೆಗಳಿಂದ ತಯಾರಿಸಿದ ಆಮ್ಲೆಟ್ ಕೂಡ ಅನುಕೂಲಕರ ಉಪಹಾರ ಆಯ್ಕೆಯಾಗಿದೆ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಹುದುಗುವ ಕಾರ್ಬೋಹೈಡ್ರೇಟ್‌ಗಳಿರುವುದರಿಂದ ಅಜೀರ್ಣ ಸಮಸ್ಯೆಯನ್ನು ದೂರಮಾಡಬಹುದು. ಈರುಳ್ಳಿ ಅಥವಾ ಬೆಳ್ಳುಳ್ಳಿ ತಿಂದ ನಂತರ ಹೊಟ್ಟೆ ಕೆಟ್ಟರೆ ಅಂತಹವರು ಅದನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ.