News Next Kannada

lifestyle

ಅಲಾರಾಂ ಇಲ್ಲದೇ ನಿಮಗೆ ಎಚ್ಚರವಾಗಲು ಸಾಧ್ಯವೇ? ಈ ಅಭ್ಯಾಸಗಳನ್ನೊಮ್ಮೆ ರೂಢಿಸಿಕೊಂಡು ನೋಡಿ..!

ದೇಹದ ಸಮಯಪಾಲನಾ ವ್ಯವಸ್ಥೆ ಎಂದರೇನು? ಅದು ನಿಮ್ಮ ನಿದ್ರೆ ಮತ್ತು ಮಹತ್ವದ ಸಮಯಗಳನ್ನು ಹೇಗೆ ನಿಯಂತ್ರಿಸುತ್ತದೆ.?

By Archana V Bhat
Photo: AI

ಪ್ರತಿದಿನ ನೀವಿಟ್ಟುಕೊಂಡ ಅಲಾರಾಂ ಬಾರಿಸುವ ಕೆಲವೇ ನಿಮಿಷಗಳ ಮೊದಲೇ ನಿಮಗೆ ಎಚ್ಚರವಾಗುತ್ತದೆ, ನಿಮ್ಮ ಮುಂಜಾನೆ ಒತ್ತಡದಲ್ಲಿರದೇ ಶಾಂತ ರೀತಿಯಿಂದ ಪ್ರಾರಂಭವಾಗುತ್ತದೆ. ಇದನ್ನೊಮ್ಮೆ ಕಲ್ಪಿಸಿಕೊಂಡು ನೋಡಿ. ದೇಹವೇ ಅಲಾರಾಂನ ಕೆಲಸ ಮಾಡುತ್ತದೆ ಎಂದರೆ ಅದೆಷ್ಟು ಸುಂದರವೆನಿಸುತ್ತದೆ ಅಲ್ಲವೇ? ನಿಮ್ಮ ನಿತ್ಯದ ಟೈಮ್‌ಟೇಬಲ್‌ ಅನ್ನು ಅದೇ ತಯಾರಿಸಿಕೊಡುತ್ತದೆ. ಇದನ್ನೇ ದೇಹದ ಸಮಯಪಾಲನಾ ವ್ಯವಸ್ಥೆ ಎನ್ನಲಾಗಿದೆ. ಇದು ಪ್ರತಿದಿನ ನಿಮ್ಮನ್ನು ಒಂದೇ ಸಮಯಕ್ಕೆ ಎಚ್ಚರಗೊಳಿಸುವಂತೆ ಮಾಡುತ್ತದೆ. ವೈಜ್ಞಾನಿಕವಾಗಿ ಇದನ್ನು ಸಿರ್ಕಾಡಿಯಮ್‌ ರಿದಮ್‌ ಎಂದು ಕರೆಯಲಾಗುತ್ತದೆ. ಇದು 24 ಗಂಟೆಗಳ ಚಕ್ರ. ನಿದ್ರೆ ಮತ್ತು ಮಹತ್ವದ ಸಮಯಗಳನ್ನು ನಿಯಂತ್ರಿಸುತ್ತದೆ. ಯುಎಸ್‌ ನ್ಯಾಷನಲ್‌ ಇನ್ಸ್ಟಿಟ್ಯೂಟ್ ಫಾರ್ ಆಕ್ಯುಪೇಷನಲ್ ಸೇಫ್ಟಿ ಅಂಡ್ ಹೆಲ್ತ್ (NIOSH) ಪ್ರಕಾರ ದೇಹದೊಳಗಿನ ಗಡಿಯಾರವು ವ್ಯಕ್ತಿಯ ಸಾಮಾನ್ಯ ಎಚ್ಚರವಾಗುವ ಸಮಯಕ್ಕಿಂತಲೂ ಮೊದಲೇ ತನ್ನ ಕೆಲಸ ಪ್ರಾರಂಭಿಸುತ್ತದೆ. ಆದರೆ ಹೀಗೆ ಸ್ವಾಭಾವಿಕವಾಗಿ ಎಚ್ಚರಗೊಳ್ಳುವಂತೆ ಮಾಡಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅದು ಯಾವುವು ಎಂದು ನೋಡೋಣ.

ಎಚ್ಚರಗೊಳ್ಳುವ ಸಮಯ ನಿರ್ಧರಿಸಿ

ವಾರಾಂತ್ಯದ ದಿನಗಳನ್ನು ಸೇರಿಸಿ ಪ್ರತಿದಿನ ಒಂದೇ ಸಮಯದಲ್ಲಿ ಏಳಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ದೇಹಕ್ಕೊಂದು ನಿಯಮಿತ ಟೈಮ್‌ಟೇಬಲ್‌ ಸಿಗುತ್ತದೆ. ರಜಾದಿನಗಳಲ್ಲಿ, ವಾರಾಂತ್ಯದಲ್ಲಿ ಯಾವುದೋ ಸಮಯಕ್ಕೆ ಏಳುವುದರಿಂದ ಸೋಮವಾರದ ಬೆಳಿಗ್ಗೆ ಬೇಸರ, ಅಸಂತೋಷಕ್ಕೆ ಕಾರಣವಾಗುತ್ತದೆ. ನಿದ್ದೆಯ ನಿಗದಿತ ವೇಳಾಪಟ್ಟಿಗಾಗಿ ನಿದ್ದೆ ಮಾಡುವ ಸಮಯ ಹಾಗೂ ನಿದ್ದೆಯಿಂದ ಏಳುವ ಸಮಯವನ್ನು ನಿರ್ಧರಿಸಿ. ಪ್ರತಿನಿತ್ಯ ಅದನ್ನು ಪಾಲಿಸುವುದು ಕೂಡಾ ಅಷ್ಟೇ ಮುಖ್ಯವಾಗಿದೆ.

ಸಂಪೂರ್ಣ ನಿದ್ದೆ ಮಾಡಿ

ಬೇಗ ಮಲಗು ಬೇಗ ಏಳು ಎನ್ನಲಾಗುತ್ತದೆ. ನಿದ್ರೆಯ ಕೊರತೆಯಿದ್ದರೆ ದಿನ ನಿತ್ಯದ ಕೆಲಸದಲ್ಲಿ ಭಾರಿ ಏರುಪೇರಾಗುತ್ತದೆ. ಉಲ್ಲಾಸ ಕಳೆದುಕೊಂಡು, ನಿರ್ಜೀವವಾಗಿ ದಿನಕಳೆಯಬೇಕಾಗುತ್ತದೆ. ಮಾನವರಿಗೆ ಪ್ರತಿದಿನ ಕನಿಷ್ಠ ಏಳು ಗಂಟೆಗಳ ನಿದ್ದೆಯ ಅವಶ್ಯಕತೆಯಿರುತ್ತದೆ. ಹಾಗಾಗಿ ಪ್ರತಿದಿನ ಒಂದೇ ಸಮಯದಲ್ಲಿ ನಿದ್ರಿಸಿ.

ನಿಮ್ಮ ಮಿದುಳನ್ನು ನಿದ್ದೆಗೆ ಸಜ್ಜುಗೊಳಿಸಿ

ನೀವು ನಿಮ್ಮ ಮಿದುಳಿಗೆ ನಿದ್ದೆಗೆ ಸಜ್ಜುಗೊಳಿಸುತ್ತಿರುವ ಬಗ್ಗೆ ಹೇಳಿ. ಹೇಗೆಂದರೆ ನಿದ್ದೆಗೆ 30 ನಿಮಿಷ ಮೊದಲು ನಿಮ್ಮ ಮಲಗುವ ಕೋಣೆಯ ಬೆಳಕನ್ನು ಕಡಿಮೆ ಮಾಡಿ. ಫೋನ್‌, ಲ್ಯಾಪ್‌ಟಾಪ್‌, ಟಿವಿಗಳನ್ನು ಆಫ್‌ ಮಾಡಿ. ಪುಸ್ತಕ ಓದುವುದು, ಬಿಸಿನೀರಿನಿಂದ ಲಘು ಸ್ನಾನ ಮಾಡುವುದು ಮುಂತಾದವುಗಳ ಮೂಲಕ ದೇಹವನ್ನು ರಿಲ್ಯಾಕ್ಸ್‌ ಮಾಡಿ. ನಿದ್ದೆಗೆ ಅಡ್ಡಿಪಡಿಸುವ ವಸ್ತುಗಳಿಂದ ದೂರವಿರಿ. ಇದು ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಕೆಫಿನ್‌, ಆಲ್ಕೋಹಾಲ್‌, ಭಾರಿ ಊಟದಿಂದ ದೂರವಿರಿ

ತಡರಾತ್ರಿ ಕಾಫಿ, ಟೀ ಕುಡಿಯುವುದರಿಂದ ನಿದ್ದೆಯಲ್ಲಿ ವ್ಯತ್ಯಾಸವಾಗಬಹುದು. ಆಲ್ಕೋಹಾಲ್‌ ಮೊದಲು ನಿದ್ದೆಯನ್ನು ತರಿಸಿದರೂ, ಮಧ್ಯದಲ್ಲಿ ನಿದ್ರೆಗೆ ಅಡ್ಡಿಪಡಿಸುತ್ತದೆ. ಅದೇ ರೀತಿ ನಿದ್ದೆಗೆ ಸ್ವಲ್ಪ ಸಮಯದ ಮೊದಲು ಮಾಡುವ ಭಾರಿ ಊಟವು ನಿದ್ದೆಯನ್ನು ದೂರಮಾಡುತ್ತದೆ.