ದೇಶದ ಯುವ ಜನತೆಗೆ ದೊರಕುತ್ತಿಲ್ಲ ಸೂಕ್ತ ಉದ್ಯೋಗ : ನೀತಿ ಆಯೋಗದಿಂದ ಹೊರಬಿತ್ತು ಶಾಕಿಂಗ್​ ಮಾಹಿತಿ

ಪ್ರಸ್ತುತ ದೇಶದಲ್ಲಿ ಸುಮಾರು 8.7 ಕೋಟಿ ಯುವಕ-ಯುವತಿಯರು ಯಾವುದೇ ಶಿಕ್ಷಣ, ಉದ್ಯೋಗ ಅಥವಾ ವೃತ್ತಿಪರ ತರಬೇತಿಗಳನ್ನು ಪಡೆಯದೆ ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ.

By ರಶ್ಮಿ ಎಸ್. | Rashmi S

1 min read

WhatsAppPost
niti aayog report india youth unemployment news
niti aayog report india youth unemployment news

ಭಾರತದ ಯುವಸಮುದಾಯದ ಭವಿಷ್ಯ ಹಾಗೂ ಉದ್ಯೋಗ ಮಾರುಕಟ್ಟೆಯ ಇಂದಿನ ವಾಸ್ತವದ ಕುರಿತು ನೀತಿ ಆಯೋಗವು ಅತ್ಯಂತ ಕಳವಳಕಾರಿ ವರದಿಯೊಂದನ್ನು ಹಂಚಿಕೊಂಡಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಲಾದ 'ರೀಇಮ್ಯಾಜಿನಿಂಗ್ ಸ್ಕಿಲ್ಲಿಂಗ್ ಫಾರ್ ವಿಕಸಿತ್ ಭಾರತ್@2047' ವರದಿಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಸುಮಾರು 8.7 ಕೋಟಿ ಯುವಕ-ಯುವತಿಯರು ಯಾವುದೇ ಶಿಕ್ಷಣ, ಉದ್ಯೋಗ ಅಥವಾ ವೃತ್ತಿಪರ ತರಬೇತಿಗಳನ್ನು ಪಡೆಯದೆ ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ. ಜಾಗತಿಕವಾಗಿ ಇದನ್ನು 'ನೀಟ್' ಅಂದರೆ Not in Education, Employment or Training ವರ್ಗ ಎಂದು ಕರೆಯಲಾಗುತ್ತದೆ.

ಈ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಯುವಜನರಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳ ಕೊರತೆಯೇ ಆಗಿದೆ. ಸದ್ಯ ದೇಶದಲ್ಲಿ ಪದವಿ ಮುಗಿಸಿದ ಕೇವಲ ಶೇ. 8.25 ರಷ್ಟು ಯುವಕರು ಮಾತ್ರ ತಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದವರು ಉದ್ಯೋಗದ ಭರವಸೆ ಇಲ್ಲದೆ, ಆರ್ಥಿಕ ಅನಿವಾರ್ಯತೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲದ ಹೊರೆಯಿಂದಾಗಿ ತಮ್ಮ ಆಸಕ್ತಿಗೆ ಸಂಬಂಧಿಸದ ಸಣ್ಣಪುಟ್ಟ ಕೆಲಸಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಬಡ ಕುಟುಂಬಗಳ ಯುವಕರಿಗೆ ಪದವಿ ಮುಗಿದ ನಂತರ ಮತ್ತೆ ಭಾರಿ ಹಣ ನೀಡಿ ಹೆಚ್ಚುವರಿ ತರಬೇತಿ ಪಡೆಯುವುದು ದುಸ್ತರವಾಗಿದೆ.

ಈ ಗಂಭೀರ ಸವಾಲನ್ನು ಎದುರಿಸಲು ನೀತಿ ಆಯೋಗವು ಸರ್ಕಾರಕ್ಕೆ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಗ್ರಾಮೀಣ ಯುವಕರು ಹಾಗೂ ಮಹಿಳೆಯರಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದೆ. ಇದರೊಂದಿಗೆ ತರಬೇತಿಯ ಜೊತೆಯಲ್ಲೇ ಸ್ಟೈಪೆಂಡ್ ಸಿಗುವ 'ಲರ್ನ್ ಅಂಡ್ ಅರ್ನ್' ಮಾದರಿಗಳನ್ನು ಪ್ರೋತ್ಸಾಹಿಸುವುದರಿಂದ ಯುವಜನರು ಆದಾಯ ಕಳೆದುಕೊಳ್ಳದೆ ಹೊಸ ಕೌಶಲ್ಯ ಕಲಿಯಬಹುದು.

ಇನ್ನು ಈಗಾಗಲೇ ಉದ್ಯೋಗದಲ್ಲಿರುವವರಿಗೆ ಆಧುನಿಕ ಮಾರುಕಟ್ಟೆಗೆ ತಕ್ಕಂತೆ ಮರುಕೌಶಲ್ಯ (Reskilling) ತರಬೇತಿ ನೀಡುವುದು ಮತ್ತು ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ಒದಗಿಸುವುದು ಅತ್ಯಗತ್ಯವಾಗಿದೆ. ಒಟ್ಟಾರೆಯಾಗಿ, ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಯುವಶಕ್ತಿಯನ್ನು ಸರಿಯಾದ ಹಾದಿಗೆ ತರುವುದು ಅನಿವಾರ್ಯ ಎಂದು ವರದಿ ಹೇಳಿದೆ.

Topics

ಸಂಬಂಧಿತ ಸುದ್ದಿಗಳು