ದೇಶದ ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದ ಈರುಳ್ಳಿ ದರವನ್ನು ನಿಯಂತ್ರಿಸಲು ಮತ್ತು ಗ್ರಾಹಕರಿಗೆ ನಿರಾಳತೆ ನೀಡಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಹಾರಾಷ್ಟ್ರದ ನಾಸಿಕ್‌ನಿಂದ ‘ಕಾಂದಾ ಎಕ್ಸ್‌ಪ್ರೆಸ್’ ಎಂಬ ವಿಶೇಷ ಸರಕು ರೈಲುಗಳ ಮೂಲಕ ದೇಶದ ಐದು ಪ್ರಮುಖ ನಗರಗಳಿಗೆ ಬರೋಬ್ಬರಿ 800 ಮೆಟ್ರಿಕ್ ಟನ್ ಈರುಳ್ಳಿಯನ್ನು ಸಾಗಿಸುವ ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ದೆಹಲಿ, ಚೆನ್ನೈ, ಮಧುರೈ, ಎರ್ನಾಕುಲಂ ಮತ್ತು ಗುವಾಹಟಿ ನಗರಗಳಿಗೆ ಈ ರೈಲುಗಳ ಮೂಲಕ ಯಥೇಚ್ಛವಾಗಿ ಈರುಳ್ಳಿ ಸರಬರಾಜು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿ ಇತರ ಪ್ರಮುಖ ನಗರಗಳಿಗೂ ಈ ವಿಶೇಷ ರೈಲು ಸೇವೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕಾಂದಾ ಎಕ್ಸ್‌ಪ್ರೆಸ್‌ನ ಒಂದು ರೈಲು ಏಕಕಾಲದಲ್ಲಿ ಸುಮಾರು 40 ದೊಡ್ಡ ಟ್ರಕ್‌ಗಳಷ್ಟು ಈರುಳ್ಳಿಯನ್ನು ಅತ್ಯಂತ ವೇಗವಾಗಿ ಮಾರುಕಟ್ಟೆಗೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ.
ಗ್ರಾಹಕರ ಜೇಬಿಗೆ ಹೊರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರವು ತನ್ನ ಬಫರ್ ದಾಸ್ತಾನಿನಲ್ಲಿದ್ದ ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಪ್ರತಿ ಕೆಜಿಗೆ ಕೇವಲ 35 ರೂಪಾಯಿಗಳ ರಿಯಾಯಿತಿ ದರದಲ್ಲಿ ನೇರವಾಗಿ ಮಾರಾಟ ಮಾಡಲು ನಿರ್ಧರಿಸಿದೆ. ಈ ಅಗ್ಗದ ದರದ ಈರುಳ್ಳಿಯು ಎನ್‌ಸಿಸಿಎಫ್ , ನಾಫೆಡ್ ಮತ್ತು ಕೇಂದ್ರೀಯ ಭಂಡಾರಗಳ ಮಾರಾಟ ಮಳಿಗೆಗಳ ಮೂಲಕ ಸಾರ್ವಜನಿಕರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ಕಂದಕವನ್ನು ಮುಚ್ಚುವ ಮೂಲಕ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸುವ ದಲ್ಲಾಳಿಗಳ ದಂಧೆಗೆ ಬ್ರೇಕ್ ಹಾಕುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಸಾಮಾನ್ಯ ಗ್ರಾಹಕರು ಇಬ್ಬರ ಹಿತಾಸಕ್ತಿಯನ್ನು ಕಾಪಾಡಲು ಇಂತಹ ಕಠಿಣ ಕ್ರಮಗಳು ಅತ್ಯಗತ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.