ರೈಲ್ವೆ ಪ್ರಯಾಣಿಕರ ಗಮನಕ್ಕೆ : ಬೆಂಗಳೂರು-ಮುಂಬೈ 'ವಂದೇ ಭಾರತ್ ಸ್ಲೀಪರ್' ಆರಂಭಕ್ಕೆ ಕ್ಷಣಗಣನೆ

24 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 16 ಗಂಟೆ! ನೈಋತ್ಯ ರೈಲ್ವೆಗೆ ಬಂತು ೨ ಹೊಸ ವಂದೇ ಭಾರತ್ ಸ್ಲೀಪರ್ ರೇಕ್: ಟಿಕೆಟ್ ದರ, ಮಾರ್ಗ ಮತ್ತು ಸೌಲಭ್ಯ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Vande bharath
Vande bharath

 ಬೆಂಗಳೂರು: ಐಟಿ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ 'ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್' (Bengaluru-Mumbai Vande Bharat Sleeper) ರೈಲು ಸಂಚಾರಕ್ಕೆ ಸಿದ್ಧತೆಗಳು ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ನೈಋತ್ಯ ರೈಲ್ವೆಯು ಈಗಾಗಲೇ 16 ಬೋಗಿಗಳಿರುವ ಎರಡು ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಸ್ವೀಕರಿಸಿ ಅಧಿಕೃತವಾಗಿ ಕಮಿಷನ್ ಮಾಡಿದೆ. ಈ ಯೋಜನೆಯ ವಿಶೇಷತೆಯೆಂದರೆ ಈ ರೈಲು ಸೆಟ್‌ಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದಲ್ಲಿ ಬೆಂಗಳೂರಿನ ಬಿಇಎಂಎಲ್ (BEML) ನಲ್ಲೇ ನಿರ್ಮಿಸಲಾಗಿದೆ. ವಿವಿಧ ಹಂತದ ಸುರಕ್ಷತಾ ಪರೀಕ್ಷೆಗಳ ಬಳಿಕ ರೈಲುಗಳನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸಲಾಗಿದೆ.

ಬೆಂಗಳೂರು ವಿಭಾಗದ ಡಿವಿಷನಲ್ ರೈಲ್ವೆ ಮ್ಯಾನೇಜರ್ (DRM) ಆಶುತೋಷ್ ಕುಮಾರ್ ಸಿಂಗ್ ಈ ವಿಷಯವನ್ನು ದೃಢಪಡಿಸಿದ್ದು, ಶೀಘ್ರದಲ್ಲೇ ಪ್ರಯಾಣದ ಅಧಿಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬೆಂಗಳೂರಿನಿಂದ ಮುಂಬೈ ತಲುಪಲು ಸುಮಾರು ೨೪ ಗಂಟೆ ಬೇಕಾಗುತ್ತದೆ. ಆದರೆ ನೂತನ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಈ ಪ್ರಯಾಣದ ಅವಧಿ ಸುಮಾರು 16 ಗಂಟೆಗಳಿಗೆ ಇಳಿಕೆಯಾಗಲಿದೆ.

ಈ ರೈಲು ರಾತ್ರಿಯ ವೇಳೆಯಲ್ಲಿ ಎರಡೂ ನಗರಗಳಿಂದ ಹೊರಡಲಿದ್ದು, ಬೆಳಿಗ್ಗೆ ಗಮ್ಯಸ್ಥಾನ ತಲುಪಲಿದೆ. ಕೆಎಸ್‌ಆರ್ ಬೆಂಗಳೂರು (KSR Bengaluru) ಅಥವಾ ಎಸ್‌ಎಂವಿಟಿ ಬೆಂಗಳೂರು (SMVT Bengaluru) ನಿಲ್ದಾಣದಿಂದ ಮುಂಬೈನ ಸಿಎಸ್‌ಎಂಟಿ (CSMT) ನಡುವೆ ಈ ಸೇವೆ ಆರಂಭಿಸಲು ರೈಲ್ವೇ ಅಧಿಕಾರಿಗಳು ಯೋಜಿಸುತ್ತಿದ್ದಾರೆ.

ಈ ಹೈ-ಸ್ಪೀಡ್ ರೈಲು ಸುಮಾರು 1137 ಕಿ.ಮೀ. ಉದ್ದದ ಕಲ್ಯಾಣ ಕರ್ನಾಟಕ ಮಾರ್ಗವಾಗಿ ಸಂಚರಿಸಲಿದೆ. ಇದರಿಂದ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಜನರಿಗೆ ಉತ್ತಮ ವೇಗದ ರೈಲು ಸಂಪರ್ಕ ಸಿಗಲಿದೆ.

ಈ ಮಾರ್ಗವು ಸಂಪೂರ್ಣ ವಿದ್ಯುದ್ದೀಕರಣ ಮತ್ತು ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿರುವುದರಿಂದ, ರೈಲು ಹಲವು ಭಾಗಗಳಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದೆ. (ಹುಬ್ಬಳ್ಳಿ ಮಾರ್ಗದಲ್ಲಿ ಸಿಂಗಲ್ ಟ್ರ್ಯಾಕ್ ಹಾಗೂ ವೇಗದ ನಿರ್ಬಂಧ ಇರುವುದರಿಂದ ಆ ಮಾರ್ಗವನ್ನು ಪರಿಗಣಿಸಲಾಗಿಲ್ಲ).


ಒಟ್ಟು ೧6 ಬೋಗಿಗಳನ್ನು ಹೊಂದಿರುವ ಈ ಆಧುನಿಕ ರೈಲಿನಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ಕೆಳಗಿನಂತೆ ಕೋಚ್‌ಗಳನ್ನು ವಿಂಗಡಿಸಲಾಗಿದೆ:

  • 11 ತ್ರೀ-ಟಯರ್ ಎಸಿ ಕೋಚ್‌ಗಳು (3AC)

  • 4 ಟೂ-ಟಯರ್ ಎಸಿ ಕೋಚ್‌ಗಳು (2AC)

  • 1 ಫಸ್ಟ್ ಕ್ಲಾಸ್ ಎಸಿ ಕೋಚ್ (1AC)

ಆಹಾರ ಮತ್ತು ಊಟದ ವೆಚ್ಚವೂ ಸೇರಿ 3AC ಟಿಕೆಟ್ ದರವು ಸುಮಾರು ₹೩,೦೦೦ ಇರಬಹುದು ಎಂದು ಅಂದಾಜಿಸಲಾಗಿದೆ. ವಿಮಾನ ಪ್ರಯಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ ಪ್ರೀಮಿಯಂ ಪ್ರಯಾಣದ ಅನುಭವವನ್ನು ಈ ರೈಲು ನೀಡಲಿದೆ. ಇನ್ನೂ ಪ್ರಾಯೋಗಿಕ ಸಂಚಾರ ಮುಗಿಯುತ್ತಿದ್ದಂತೆ ರೈಲಿನ ಉದ್ಘಾಟನೆ ಮತ್ತು ಅಧಿಕೃತ ಸೇವಾ ದಿನಾಂಕಗಳನ್ನು ರೈಲ್ವೆ ಮಂಡಳಿ ಪ್ರಕಟಿಸಲಿದೆ.

Topics

ಸಂಬಂಧಿತ ಸುದ್ದಿಗಳು