ವಿಧಾನಸೌಧದಲ್ಲಿ ಫ್ರೀಡಂ ಹಬ್ಬ : ಮಕ್ಕಳ ಜೊತೆ ಬಂದ್ರೆ ಶಕ್ತಿಸೌಧಕ್ಕೆ ಉಚಿತ ಪ್ರವೇಶ
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಅತ್ಯಂತ ಸ್ಮರಣೀಯವಾಗಿ ಆಚರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ
By ಜೋಬಿನ್ ಅಮಾಸೆಬೈಲು | Jobin Amasebail
1 min read
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಅತ್ಯಂತ ಸ್ಮರಣೀಯವಾಗಿ ಆಚರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಆಗಸ್ಟ್ 15 ರಂದು ಬೆಂಗಳೂರಿನ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಭವ್ಯ 'ಫ್ರೀಡಂ ಹಬ್ಬ'ವನ್ನು ಆಯೋಜಿಸಲಾಗಿದ್ದು, ಅಂದು ಮಕ್ಕಳು ಮತ್ತು ಅವರ ಜೊತೆ ಬರುವ ಪೋಷಕರಿಗೆ ಉಚಿತವಾಗಿ ಒಳಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಹಬ್ಬದ ಮುಖ್ಯ ಉದ್ದೇಶ ಮುಂಬರುವ ಪೀಳಿಗೆಗೆ ದೇಶದ ಇತಿಹಾಸ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಆಳವಾದ ಅರಿವು ಮೂಡಿಸುವುದಾಗಿದೆ. ಅಂದು ವಿಧಾನಸೌಧಕ್ಕೆ ಭೇಟಿ ನೀಡುವ ಮಕ್ಕಳಿಗೆ ಅನುಭವೀ ಮಾರ್ಗದರ್ಶಕರಿಂದ ಇಡೀ ಶಾಸನಸಭೆಯ ವಿಶೇಷ ಪ್ರವಾಸವನ್ನು ಏರ್ಪಡಿಸಲಾಗುತ್ತದೆ.
ಇದರೊಂದಿಗೆ ರಸಪ್ರಶ್ನೆ, ಕಥೆ ಹೇಳುವ ಸ್ಪರ್ಧೆಗಳು, ಕರಕುಶಲ ಮತ್ತು ಸೃಜನಾತ್ಮಕ ಕಾರ್ಯಾಗಾರಗಳು ನಡೆಯಲಿವೆ. ಸ್ಪರ್ಧೆಗಳಲ್ಲಿ ವಿಜೇತರಾಗುವ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು. ಅಲ್ಲದೆ, ವಿವಿಧ ಕಲಾವಿದರು ಜೀವಂತ ಪ್ರದರ್ಶನಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ರೋಮಾಂಚನಕಾರಿ ಜೀವನಗಾಥೆಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಲಿದ್ದಾರೆ.
ಕೇವಲ ಮಕ್ಕಳ ಚಟುವಟಿಕೆಗಳಷ್ಟೇ ಅಲ್ಲದೆ, ವಿಧಾನಸೌಧದ ಸುತ್ತಮುತ್ತಲಿನ ಆವರಣದಲ್ಲಿ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಹಲವು ಆಕರ್ಷಣೆಗಳು ಕಾಯುತ್ತಿವೆ. ಅದ್ಭುತವಾದ 'ಇಂಡಿಯಾ ಪೆರೇಡ್', ಸಂಗೀತ ಗೋಷ್ಠಿಗಳು, ಲೈವ್ ಮ್ಯೂಸಿಯಂ ಮತ್ತು ವಿವಿಧ ಜಿಲ್ಲೆಗಳ ದೇಶಭಕ್ತಿ ಹೋರಾಟವನ್ನು ಪ್ರದರ್ಶಿಸುವ ಸುಂದರ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ.
ದೇಶದ ಬೇರೆ ಬೇರೆ ಪ್ರಾಂತ್ಯಗಳ ವಿಶಿಷ್ಟ ಪಾಕಪದ್ಧತಿಯ ಆಹಾರ ಮಳಿಗೆಗಳು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವೂ ಇರಲಿದ್ದು, ಸಾರ್ವಜನಿಕರಿಗೆ 'ಸಂವಿಧಾನ ಚೌಕ' ಪ್ರಮುಖ ಆಕರ್ಷಣೆಯಾಗಲಿದೆ.
ಈ ಐತಿಹಾಸಿಕ ಸಂಭ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಇಲಾಖೆಯು ಬಿಡುಗಡೆ ಮಾಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಿ ಮುಂಚಿತವಾಗಿಯೇ ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
Topics
ಸಂಬಂಧಿತ ಸುದ್ದಿಗಳು
karnataka
ರೈಲ್ವೆ ಪ್ರಯಾಣಿಕರ ಗಮನಕ್ಕೆ : ಬೆಂಗಳೂರು-ಮುಂಬೈ 'ವಂದೇ ಭಾರತ್ ಸ್ಲೀಪರ್' ಆರಂಭಕ್ಕೆ ಕ್ಷಣಗಣನೆ
karnataka
ಆಗಸ್ಟ್ 11ರವರೆಗೂ ಮುಂದುವರಿಯಲಿದೆ ಮುಂಗಾರಿನ ಅಲೆ : ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ
karnataka
ಪ್ರೀವೆಡ್ಡಿಂಗ್ ಶೂಟ್, ಬರ್ತ್ಡೇ ಆಚರಣೆಗಳಿಗೆ ಬಾಡಿಗೆಗೆ ಸಿಗಲಿದೆ ಅಂಬಾರಿ ಬಸ್!
karnataka

