ಆಸ್ತಿ ಮಾಲೀಕರಿಗೆ ಗುಡ್​ನ್ಯೂಸ್​ : ಇನ್ಮುಂದೆ ಸರ್ಕಾರಿ ಕಚೇರಿ ಅಲೆಯುವ ಅಗತ್ಯವೇ ಇಲ್ಲ!

ಇನ್ನು ಮುಂದೆ ಅಧಿಕಾರಿಗಳೇ ನೇರವಾಗಿ ಜನರ ಮನೆ-ಮನೆಗೆ ತೆರಳಿ ಆಸ್ತಿಗಳ ಇ-ಸ್ವತ್ತು ಹಾಗೂ ಖಾತಾ ದಾಖಲೆಗಳನ್ನು ವಿತರಿಸಲಿದ್ದಾರೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಪ್ರಕಟಿಸಿದ್ದಾರೆ.

By ರಶ್ಮಿ ಎಸ್. | Rashmi S

1 min read

WhatsAppPost
karnataka property owners good news e-khata online services
karnataka property owners good news e-khata online services

ಸಾರ್ವಜನಿಕರು ಸರ್ಕಾರಿ ಕಚೇರಿಗಳ ಸುತ್ತ ಅನಗತ್ಯವಾಗಿ ಅಲೆಯುವುದನ್ನು ತಪ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಅಧಿಕಾರಿಗಳೇ ನೇರವಾಗಿ ಜನರ ಮನೆ-ಮನೆಗೆ ತೆರಳಿ ಆಸ್ತಿಗಳ ಇ-ಸ್ವತ್ತು ಹಾಗೂ ಖಾತಾ ದಾಖಲೆಗಳನ್ನು ವಿತರಿಸಲಿದ್ದಾರೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಪ್ರಕಟಿಸಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ರು.

ಈಗಾಗಲೇ ಕರಡು ಖಾತೆಗಳು ಸಿದ್ಧವಾಗಿದ್ದು, ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಕೇವಲ ಮೂಲ ಮಾಲೀಕರಿಗೆ ಮಾತ್ರ ಇವುಗಳನ್ನು ಹಸ್ತಾಂತರಿಸಲಾಗುವುದು. ಮಧ್ಯವರ್ತಿಗಳ ಹಾವಳಿ ಹಾಗೂ ಮೂರನೇ ವ್ಯಕ್ತಿಗಳಿಗೆ ಖಾತೆ ವರ್ಗಾವಣೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಇದರೊಂದಿಗೆ, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲು ಅಗೆಯಲಾದ ರಸ್ತೆಗಳನ್ನು ಗುತ್ತಿಗೆದಾರರು ತಕ್ಷಣವೇ ಮೊದಲಿನ ಸ್ಥಿತಿಗೆ ದುರಸ್ತಿ ಮಾಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮತ್ತೊಂದೆಡೆ, ಮಳೆ ಕೊರತೆಯಿಂದಾಗಿ ಗ್ರಾಮೀಣ ಜನತೆ ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಖಾತರಿ ಯೋಜನೆಯನ್ನು ತೀವ್ರಗೊಳಿಸಲಾಗುವುದು. ಇದಕ್ಕಾಗಿ ಬರೋಬ್ಬರಿ 2,900 ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನ ಲಭ್ಯವಿದ್ದು, ಹಣಕಾಸಿನ ಯಾವುದೇ ಕೊರತೆಯಿಲ್ಲ.

ನರೇಗಾ ಅಡಿ ಕೆಲಸಕ್ಕೆ ಅಥವಾ ಹೊಸ ಜಾಬ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಕೇವಲ 24 ಗಂಟೆಗಳ ಒಳಗಾಗಿ ಅದನ್ನು ವಿತರಿಸಬೇಕು. ಒಂದು ವೇಳೆ ಹಳ್ಳಿಗಳಿಂದ ಜನರು ಕೆಲಸ ಸಿಗದೆ ವಲಸೆ ಹೋದರೆ ಅದಕ್ಕೆ ಆಯಾ ಭಾಗದ ಇಓ ಮತ್ತು ಪಿಡಿಒ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಿ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

Topics

ಸಂಬಂಧಿತ ಸುದ್ದಿಗಳು