karnatakaBreakingಪ್ರಮುಖ ಸುದ್ದಿಗಳು

ಸೈಟ್​ ಖಾಲಿ ಬಿಟ್ರೆ ಜಪ್ತಿ : ಸಿಎಂ ಡಿಕೆ ಶಿವಕುಮಾರ್‌ ಖಡಕ್​ ವಾರ್ನಿಂಗ್​

ರಾಜಧಾನಿಯ ಸೌಂದರ್ಯೀಕರಣ ಮತ್ತು ಸ್ವಚ್ಛತೆಗೆ ದಕ್ಕೆ ತರುವ ಖಾಲಿ ಸೈಟ್‌ಗಳ ಮಾಲೀಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸ್ವರೂಪದ ಎಚ್ಚರಿಕೆ

By ರಶ್ಮಿ ಎಸ್. | Rashmi S

1 min read

WhatsAppPost
dk shivakumar warns owners of empty sites
dk shivakumar warns owners of empty sites

ಬೆಂಗಳೂರು : ರಾಜಧಾನಿಯ ಸೌಂದರ್ಯೀಕರಣ ಮತ್ತು ಸ್ವಚ್ಛತೆಗೆ ದಕ್ಕೆ ತರುವ ಖಾಲಿ ಸೈಟ್‌ಗಳ ಮಾಲೀಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ, ಬಿಡಿಎ ಅಥವಾ ವಿವಿಧ ಹೌಸಿಂಗ್ ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ ಐದು ವರ್ಷಗಳ ಒಳಗಾಗಿ ಕಡ್ಡಾಯವಾಗಿ ಮನೆ ನಿರ್ಮಿಸದಿದ್ದರೆ ಅಂತಹ ಆಸ್ತಿಗಳನ್ನು ಸರ್ಕಾರವೇ ಹಿಂಪಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೆಬ್ಬಾಳದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಲವರು ಕೇವಲ ಹೂಡಿಕೆಯ ಲಾಭಕ್ಕಾಗಿ ದೀರ್ಘಕಾಲದವರೆಗೆ ಜಾಗವನ್ನು ಖಾಲಿ ಬಿಡುತ್ತಿದ್ದಾರೆ. ಇಂತಹ ನಿವೇಶನಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟು ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಮಾಡುತ್ತಿವೆ.

ಇನ್ಮುಂದೆ ಖಾಲಿ ಸೈಟ್‌ಗಳಿಗೆ ಕಾಂಪೌಂಡ್ ಹಾಕದಿದ್ದರೆ ಅಥವಾ ಸ್ವಚ್ಛವಾಗಿಡದಿದ್ದರೆ ಎರಡರಷ್ಟು ಆಸ್ತಿ ತೆರಿಗೆ ವಿಧಿಸಲಾಗುತ್ತದೆ. ಇಷ್ಟಕ್ಕೂ ಮಣಿಯದಿದ್ದರೆ, ಮಾಲೀಕರು ಅಂದು ಪಾವತಿಸಿದ್ದ ಅಸಲು ಹಣಕ್ಕೆ ನಿಯಮಾನುಸಾರ ಬಡ್ಡಿ ಸೇರಿಸಿ, ದ್ವಿಗುಣ ಮೊತ್ತ ನೀಡಿ ಜಾಗವನ್ನು ವಶಪಡಿಸಿಕೊಳ್ಳಲಾಗುವುದು ಎಂದಿದ್ದಾರೆ.

ಇದೇ ವೇಳೆ ಶಿವಾಜಿನಗರದಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿದ ಅವರು, ಇಂತಹ ಗೂಂಡಾಗಿರಿ ವರ್ತನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

ಈ ದಾಳಿಯನ್ನು ವೈಯಕ್ತಿಕವಾಗಿ ಇಲಾಖೆಯ ಮೇಲಿನ ಹಲ್ಲೆ ಎಂದು ಪರಿಗಣಿಸಲಾಗಿದ್ದು, ಕಾನೂನು ಬಾಹಿರ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದಿದ್ದಾರೆ. ನಗರದ ರಸ್ತೆಗಳನ್ನು ದತ್ತು ಪಡೆದು ಸ್ವಚ್ಛಗೊಳಿಸುವ ಸಂಘ-ಸಂಸ್ಥೆಗಳಿಗೆ ಸರ್ಕಾರದಿಂದ ವಿಶೇಷ ಗೌರವ ಪ್ರಮಾಣಪತ್ರ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು