300ಕ್ಕೂ ಹೆಚ್ಚು ಹಾಡುಗಳಿಗೆ ಲಯ ಸಂಯೋಜಿಸಿದ್ದ ಸಂಗೀತಗಾರ ದೇವ್ ಇನ್ನಿಲ್ಲ : ಬೆಂಗಳೂರಿನಲ್ಲಿ ಕೊನೆಯುಸಿರು
ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಸಂಗೀತಗಾರ, 'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿದ್ದ ಹಿರಿಯ ಡ್ರಮ್ಸ್ ವಾದಕ ದೇವ ಅವರು ತೀವ್ರ ಅನಾರೋಗ್ಯದಿಂದ ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಸಂಗೀತಗಾರ, 'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿದ್ದ ಹಿರಿಯ ಡ್ರಮ್ಸ್ ವಾದಕ ದೇವ ಅವರು ತೀವ್ರ ಅನಾರೋಗ್ಯದಿಂದ ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಮೂರೂವರೆ ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಎರಡು ದಿನಗಳಿಂದ ಅವರ ಸ್ಥಿತಿ ಮತ್ತೆ ಹದಗೆಟ್ಟು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂದು ಅವರ ಪುತ್ರಿ ರಿಶೋನಾ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಲಯಬದ್ಧ ವಾದನದ ಮೂಲಕ ದಶಕಗಳ ಕಾಲ ರಾಜಿಸಿದ್ದ ದೇವ ಅವರು, ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರ ಸಿನಿಮಾಗಳ ಮುನ್ನೂರಕ್ಕೂ ಹೆಚ್ಚು ಗೀತೆಗಳಿಗೆ ಡ್ರಮ್ಸ್ ನುಡಿಸಿದ್ದರು. ಗುರುಕಿರಣ್ ಹಾಗೂ ಸಾಧು ಕೋಕಿಲ ಅವರಂತಹ ದಿಗ್ಗಜ ಸಂಗೀತ ನಿರ್ದೇಶಕರ ತಂಡಗಳಲ್ಲಿ ಪ್ರಮುಖ ವಾದಕರಾಗಿ ಗುರುತಿಸಿಕೊಂಡಿದ್ದ ಅವರು, '5 ಈಡಿಯಟ್ಸ್' ಹಾಗೂ 'ಪ್ರೀತಿ ನೀ ಹಿಂಗ್ಯಾಕೆ' ಚಿತ್ರಗಳಿಗೆ ಸ್ವತಂತ್ರವಾಗಿ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು.
ಸಂಗೀತದ ಮೇಲಿದ್ದ ಅವರ ಅಪಾರ ಪ್ರೀತಿ ಮತ್ತು ಅದಮ್ಯ ಚೇತನ ಎಲ್ಲರಿಗೂ ಮಾದರಿಯಾಗಿತ್ತು. ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ಇತ್ತೀಚೆಗೆ ಅವರು ತಮ್ಮ ಒಂದು ಕಾಲನ್ನು ಕಳೆದುಕೊಳ್ಳಬೇಕಾಗಿ ಬಂದರೂ, ಕೃತಕ ಕಾಲಿನ ಸಹಾಯದಿಂದ ಮತ್ತೆ ಡ್ರಮ್ಸ್ ನುಡಿಸುವುದನ್ನು ಮುಂದುವರಿಸಿದ್ದರು. ಕೊನೆಯ ದಿನಗಳಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾಗಲೂ ಅವರು ಕೈಯಲ್ಲಿ ಸ್ಟಿಕ್ಸ್ ಹಿಡಿದು ಡ್ರಮ್ಸ್ ನುಡಿಸುವ ಅಭ್ಯಾಸ ಮಾಡುತ್ತಿದ್ದರು ಎಂದು ಅವರ ಕುಟುಂಬದವರು ನೆನೆದಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ಕ್ರೈಸ್ತ ಧರ್ಮದ ವಿಧಿವಿಧಾನಗಳ ಪ್ರಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ದೇವ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Topics

