ಗೃಹಲಕ್ಷ್ಮೀ ಯೋಜನೆಯಲ್ಲಿ ಹೊಸ ರೂಲ್ಸ್​ : ಯಜಮಾನಿಯರ ಹೆಸರಲ್ಲೇ ಸಿಮ್​ ಕಾರ್ಡ್ ಕಡ್ಡಾಯ

ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಆರ್ಥಿಕ ನೆರವು ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಈ ಹೊಸ ಪಾರದರ್ಶಕ ನಿಯಮವನ್ನು ಜಾರಿಗೆ ತರಲಾಗಿದೆ.

By ರಶ್ಮಿ ಎಸ್. | Rashmi S

1 min read

WhatsAppPost
gruha lakshmi scheme new rules sim card mandatory karnataka
gruha lakshmi scheme new rules sim card mandatory karnataka

ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಯೋಜನೆಯಲ್ಲಿ ಕಂಡುಬಂದಿದ್ದ ನಕಲಿ ಹಾಗೂ ಅನರ್ಹ ಫಲಾನುಭವಿಗಳನ್ನು ವ್ಯವಸ್ಥೆಯಿಂದ ಹೊರದಬ್ಬುವ ಉದ್ದೇಶದಿಂದ, ಇನ್ಮುಂದೆ ಮನೆಯ ಯಜಮಾನಿಯ ಹೆಸರಿನಲ್ಲೇ ಮೊಬೈಲ್ ಸಿಮ್ ಕಾರ್ಡ್ ಹೊಂದುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಆರ್ಥಿಕ ನೆರವು ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಈ ಹೊಸ ಪಾರದರ್ಶಕ ನಿಯಮವನ್ನು ಜಾರಿಗೆ ತರಲಾಗಿದೆ.

ಸರ್ಕಾರ ನಡೆಸಿದ ಆಂತರಿಕ ಪರಿಶೀಲನೆಯ ವೇಳೆ ಯೋಜನೆಯಲ್ಲಿ ದೊಡ್ಡ ಮಟ್ಟದ ಲೋಪದೋಷಗಳು ಬೆಳಕಿಗೆ ಬಂದಿದ್ದವು. ಸುಮಾರು ಎರಡು ಲಕ್ಷದಷ್ಟು ಮೃತಪಟ್ಟ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರುವುದು ಪತ್ತೆಯಾಗಿತ್ತು. ಕೆಲವು ಕಡೆ ಮೂಲ ಫಲಾನುಭವಿಗಳನ್ನು ಹೊರತುಪಡಿಸಿ ಅವರ ಪತಿಯಂದಿರ ಅಥವಾ ಹೊರರಾಜ್ಯದವರ ಖಾತೆಗಳಿಗೆ ಹಣ ತಲುಪುತ್ತಿರುವುದು ಪತ್ತೆಯಾಗಿತ್ತು.

ಈ ಅಕ್ರಮಗಳಿಗೆ ತಡೆ ಒಡ್ಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಪ್ರಸ್ತುತ ಹೊಸ ಮಾನದಂಡಗಳ ಆಧಾರದ ಮೇಲೆ ಸುಮಾರು 1.24 ಕೋಟಿ ನೈಜ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಈ ಹೊಸ ಸುಧಾರಣೆಯ ಬೆನ್ನಲ್ಲೇ ಅರ್ಹ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಯೋಜನೆಯ 33ನೇ ಕಂತಿನ ಒಟ್ಟು 2,480 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಸಜ್ಜಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ನಗದು ವರ್ಗಾವಣೆ ಮುಖಾಂತರ ಈ ಹಣವು ಶೀಘ್ರದಲ್ಲೇ ಮಹಿಳೆಯರ ಬ್ಯಾಂಕ್ ಖಾತೆಗಳನ್ನು ಸೇರಲಿದೆ.

ಈವರೆಗೆ ಸತತವಾಗಿ 32 ಕಂತುಗಳಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಯಶಸ್ವಿಯಾಗಿ ಹಣ ವಿತರಿಸಲಾಗಿದ್ದು, ಇದೀಗ ನೂತನ ನಿಯಮಗಳ ಅಳವಡಿಕೆಯಿಂದಾಗಿ ಯೋಜನೆ ಸಂಪೂರ್ಣವಾಗಿ ನೈಜ ಕನ್ನಡಿಗರಿಗೆ ಮಾತ್ರ ತಲುಪುವಂತಾಗಿದೆ.

Topics

ಸಂಬಂಧಿತ ಸುದ್ದಿಗಳು