ಸಚಿವ ಸಂಪುಟ ವಿಸ್ತರಣೆಯಲ್ಲಿ ಹೈಡ್ರಾಮಾ: ಪಟ್ಟಿಯಲ್ಲಿದ್ದರೂ ಮಂಕಾಳು ವೈದ್ಯಗೆ ಸಿಗದ ಮಂತ್ರಿಗಿರಿ
ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಎಐಸಿಸಿ ಪ್ರಕಟಿಸಿದ ನೂತನ ಸಚಿವರ ಪಟ್ಟಿಯಲ್ಲಿ ಹೆಸರಿದ್ದರೂ, ಕೊನೇ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈತಪ್ಪಿದೆ.
By Meghana Pranuth | ಮೇಘನಾ ಪ್ರಣೂತ್
1 min read
ಬೆಂಗಳೂರು, ಆಗಸ್ಟ್ 03: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಎಐಸಿಸಿ (AICC) ಪ್ರಕಟಿಸಿದ 20 ನೂತನ ಸಚಿವರ ಪಟ್ಟಿಯಲ್ಲಿ ಹೆಸರಿದ್ದರೂ, ಕೊನೇ ಕ್ಷಣದಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.
ಮಂತ್ರಿಗಳ ಪಟ್ಟಿ ಬಿಡುಗಡೆಯಾದ ಬಳಿಕ ನಡೆದ ಈ ಅಚ್ಚರಿಯ ಬೆಳವಣಿಗೆಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಿದೆ.
ನೂತನ ಸಚಿವರ ಮೂಲ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಇರಲಿಲ್ಲ. ಮಾಧ್ಯಮಗಳಿಗೆ ನೀಡಿದ ಪಟ್ಟಿಯಲ್ಲಿ ಅವರ ಹೆಸರು ಬಂದಿರುವುದು ಕೇವಲ 'ಟೈಪಿಂಗ್ ಮಿಸ್ಟೇಕ್' (Typing Mistake) ಎಂದು ಎಐಸಿಸಿ ತಿಳಿಸಿದೆ. ಮಂಕಾಳು ವೈದ್ಯ ಅವರ ಬದಲಿಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡ ಶಾಸಕ ಮಂಕಾಳು ವೈದ್ಯ ಅವರು ತಕ್ಷಣವೇ ಸಿಎಂ ನಿವಾಸಕ್ಕೆ ಧಾವಿಸಿದರು. ಕೊನೇ ಕ್ಷಣದ ಈ ಹಠಾತ್ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಭೇಟಿಗೆ ಯತ್ನಿಸಿದರು. ಆದರೆ, ಸಿಎಂ ಭೇಟಿ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
"ನಾನು ಸಿಎಂ ಅವರನ್ನು ಭೇಟಿ ಆಗಿಲ್ಲ, ಅವರು ಸಿಕ್ಕಿಲ್ಲ. ಮತ್ತೊಮ್ಮೆ ಬರುತ್ತೇನೆ." – ಹೀಗೆಂದು ಮಾಧ್ಯಮಗಳಿಗೆ ಅಷ್ಟೇ ಹೇಳಿ, ಸಿಎಂ ನಿವಾಸದಿಂದ ಸಿಟ್ಟಿನಲ್ಲೇ ಹೊರಟುಹೋದರು.
ಮಂಕಾಳು ವೈದ್ಯ ಅವರಿಗೆ ಕೊಕ್ ನೀಡಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಮೇಲೆ ಬಿದ್ದ ಭಾರಿ ರಾಜಕೀಯ ಒತ್ತಡವೇ ಕಾರಣ ಎನ್ನಲಾಗಿದೆ. ಸಚಿವ ಸ್ಥಾನ ಸಿಗದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಲ್ಲಿಕಾರ್ಜುನ್ ಪಟ್ಟು ಹಿಡಿದಿದ್ದರು. ತಮಗೆ ಮಂತ್ರಿಗಿರಿ ಸಿಗದಿದ್ದರೆ, ಸಂಸದರಾಗಿರುವ ತಮ್ಮ ಪತ್ನಿ ಹಾಗೂ ಶಾಸಕರಾಗಿರುವ ಮಗ ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದರು.
ಈ ಭಾರಿ ಒತ್ತಡ ತಂತ್ರಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್, ಕೊನೇ ಕ್ಷಣದಲ್ಲಿ ಮಂಕಾಳು ವೈದ್ಯ ಅವರ ಹೆಸರು ಕೈಬಿಟ್ಟು ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ಅಂತಿಮಗೊಳಿಸಿದೆ.
Topics
ಸಂಬಂಧಿತ ಸುದ್ದಿಗಳು
karnataka
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ : 13 ಮಂದಿ ಹೊಸ ಶಾಸಕರಿಗೆ ಸಚಿವಗಿರಿ : ಗಾಯತ್ರಿ ಶಾಂತೇಗೌಡಗೆ ಜಾಕ್ಪಾಟ್
karnataka
ECI Big Update : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; ನಿಮ್ಮ ಹೆಸರು ಡಿಲೀಟ್ ಆಗದಂತೆ ಹೀಗೆ ಚೆಕ್ ಮಾಡಿ
karnataka
ಮುಂದಿನ 6 ದಿನಗಳ ಕಾಲ ಕರ್ನಾಟಕದಲ್ಲಿ ರಣಭೀಕರ ಮಳೆ- ಕರಾವಳಿ, ಮಲೆನಾಡಿಗೆ ಹವಾಮಾನ ಇಲಾಖೆ ಎಚ್ಚರಿಕೆ
karnataka

