ಕರ್ನಾಟಕ ಸಚಿವ ಸಂಪುಟ ವಿಸ್ತರಣೆ : ಸಂಚಲನ ಮೂಡಿಸಿದ ಸಿದ್ದು ಗೈರು, ಶಾಸಕರ ರಾಜೀನಾಮೆ ಪರ್ವ
ಹಳೆಯ ಸಂಪುಟದಲ್ಲಿದ್ದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾಮ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಒಟ್ಟು 12 ಸಚಿವರಿಗೆ ನೇರವಾಗಿ ಕೋಕ್ ನೀಡಲಾಗಿದೆ.
ಬೆಂಗಳೂರು : ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಎರಡನೇ ಹಂತದ ಪುನರ್ರಚನೆ ಪ್ರಕ್ರಿಯೆಯು ಕೊನೆಗೂ ನೆರವೇರಿದೆ.
ಒಟ್ಟು 19 ಶಾಸಕರು ನೂತನ ಸಚಿವರಾಗಿ ರಾಜಭವನದಲ್ಲಿ ಪದಗ್ರಹಣ ಮಾಡಿದ್ದಾರೆ. ಆದರೆ ಈ ಸಂಪುಟ ವಿಸ್ತರಣೆಯು ಮುಕ್ತಾಯಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಅಸಮಾಧಾನದ ಜ್ವಾಲೆ ಹೊತ್ತಿ ಉರಿದಿದ್ದು, ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಈ ಬಾರಿಯ ಪುನರ್ರಚನೆಯಲ್ಲಿ ಹಳೆಯ ಸಂಪುಟದಲ್ಲಿದ್ದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾಮ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಒಟ್ಟು 12 ಸಚಿವರಿಗೆ ನೇರವಾಗಿ ಕೋಕ್ ನೀಡಲಾಗಿದೆ.
ಇನ್ನು ಇಡೀ ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. ಕುರುಬ ಸಮುದಾಯದ ಕೋಟಾದಡಿ ತಾವು ಶಿಫಾರಸು ಮಾಡಿದ್ದ ಬಸವರಾಜ ಶಿವಣ್ಣವರ್ ಅವರ ಹೆಸರನ್ನು ಕೈಬಿಟ್ಟು, ಕೊನೆ ಕ್ಷಣದಲ್ಲಿ ಬೇರೊಬ್ಬರನ್ನು ಪರಿಗಣಿಸಿದ್ದಕ್ಕೆ ಸಿದ್ದರಾಮಯ್ಯ ತೀವ್ರ ಮುನಿಸಿಕೊಂಡು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ನೂತನ 19 ಸಚಿವರ ಸೇರ್ಪಡೆಯೊಂದಿಗೆ ಸಂಪುಟದ ಒಟ್ಟು ಬಲಾಬಲ 33ಕ್ಕೇರಿದೆ. ಆದರೆ ಇಡೀ ಕ್ಯಾಬಿನೆಟ್‌ನಲ್ಲಿ ಒಬ್ಬರೇ ಒಬ್ಬರು ಮಹಿಳಾ ಪ್ರತಿನಿಧಿ ಇಲ್ಲದಿರುವುದು ಎದ್ದು ಕಾಣುತ್ತಿದೆ. ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಹರಸಾಹಸ ಪಡಲಾಗಿದ್ದರೂ, ಏಳು ಜಿಲ್ಲೆಗಳಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಬದಲಿಗೆ ರಾಜಧಾನಿ ಬೆಂಗಳೂರು ನಗರ ಒಂದಕ್ಕೇ ಆರು ಸಚಿವ ಸ್ಥಾನಗಳನ್ನು ನೀಡಿ ಸಿಂಹಪಾಲು ಕಲ್ಪಿಸಲಾಗಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡ ಇಂಡಿ ಕ್ಷೇತ್ರದ ಹಿರಿಯ ಶಾಸಕ ಯಶವಂತರಾಯಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಇವರ ಬೆನ್ನಲ್ಲೇ ಟಿ.ಬಿ. ಜಯಚಂದ್ರ, ಬೇಲೂರು ಗೋಪಾಲಕೃಷ್ಣ ಸೇರಿದಂತೆ ನಾಲ್ಕೈದು ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಇತ್ತ ಹುಬ್ಬಳ್ಳಿ, ಮೈಸೂರು, ಬೆಳಗಾವಿ ಮತ್ತು ಕೊಪ್ಪಳದಲ್ಲಿ ಪ್ರಸಾದ್ ಅಬ್ಬಯ್ಯ ಹಾಗೂ ತನ್ವೀರ್ ಸೇಠ್ ಬೆಂಬಲಿಗರು ರಸ್ತೆ ತಡೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯಕ್ಕೆ ಹರಡಿರುವ ಈ ಕೋಪವನ್ನು ತಣಿಸಲು ಹೈಕಮಾಂಡ್ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಭರವಸೆ ನೀಡಲು ಮುಂದಾಗಿದೆ ಆದರೂ, ಬಂಡಾಯದ ಕಿಚ್ಚು ಸದ್ಯಕ್ಕೆ ಆರುವಂತೆ ಕಾಣುತ್ತಿಲ್ಲ.
Topics
ಸಂಬಂಧಿತ ಸುದ್ದಿಗಳು
karnataka
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಪಿ, ರೀಲ್ಸ್ಗೆ ಬೀಳಲಿದೆ ಸಂಪೂರ್ಣ ಬ್ರೇಕ್
karnataka
ತುಳುವಿಗೆ ಸಿಕ್ತು ಎರಡನೇ ರಾಜ್ಯ ಭಾಷೆ ಸ್ಥಾನಮಾನ : ಕಾಫಿನಾಡಲ್ಲೀಗ ಕೊಡವ ಭಾಷೆಗೆ ಮಾನ್ಯತೆಯ ಕೂಗು
karnataka
ಕರ್ನಾಟಕದಲ್ಲಿ ಇಂದಿನಿಂದ ಮತ್ತೆ ಆರ್ಭಟಿಸಲಿದೆ ಮಳೆ : 13 ಜಿಲ್ಲೆಗಳಿಗೆ ಜಾರಿಯಾಯ್ತು ಯೆಲ್ಲೋ ಅಲರ್ಟ್ ಘೋಷಣೆ
karnataka

