ಫೋನಿನಲ್ಲಿ ವಿಶ್ ಮಾಡದೆ ಚಿನ್ನ ಗೆದ್ದ ಪೂವಮ್ಮ ಮಂಗಳೂರಿನ ಮನೆಗೆ ನೇರ ಭೇಟಿ ನೀಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ !
ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಶನಿವಾರ ಮಂಗಳೂರಿನ ಅವರ ನಿವಾಸಕ್ಕೇ ಆಗಮಿಸಿ ಅಭಿನಂದಿಸಿದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಮಂಗಳೂರು: ಪೂವಮ್ಮ ಮನೆಗೆ ಭೇಟಿ ನೀಡಿ ಅಭಿನಂದಿಸಿದ ವಿಶೇಷ ಸಂಗತಿ ಮಂಗಳೂರಿನಲ್ಲಿ ನಡೆದಿದೆ. ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮ ಮನೆಗೆ ಕೊಡಗಿನ ಮಡಿಕೇರಿಯಿಂದ ಮಂಗಳೂರಿಗೆ ಆಗಮಿಸಿದ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಪೂವಮ್ಮ ಅವರನ್ನು ಅವರ ಮನೆಯಲ್ಲಿ ಅಭಿನಂದಿಸಿದ ವಿಶೇಷ ಪ್ರಸಂಗ ನಡೆದಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ದೇಶ ಹಾಗೂ ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಶನಿವಾರ ಮಂಗಳೂರಿನ ಅವರ ನಿವಾಸಕ್ಕೇ ಆಗಮಿಸಿ ಅಭಿನಂದಿಸಿದರು.
ಪೂವಮ್ಮ ಅವರು ಮೂಲತಃ ಕೊಡಗು ಜಿಲ್ಲೆಯ ಗೋಣಿಕೊಪ್ಪದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಶಾಸಕಾಂಗ ಕ್ಷೇತ್ರದ ವ್ಯಾಪ್ತಿಗೆ ಬಾರದಿದ್ದರೂ ಕೂಡ ಕೊಡಗಿನ ಕುವರಿಯ ಸಾಧನೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಶಾಸಕ ಡಾ. ಮಂಥರ್ ಗೌಡ ಅವರು ಸ್ವತಃ ಮಡಿಕೇರಿಯಿಂದ ಮಂಗಳೂರಿಗೆ ಆಗಮಿಸಿ ಶುಭ ಹಾರೈಸಿರುವುದು ಗಮನ ಸೆಳೆದಿದೆ.
ಪದಕ ಗೆದ್ದು ಶುಕ್ರವಾರ ಮಂಗಳೂರಿಗೆ ಬಂದಿಳಿದಿದ್ದ ಪೂವಮ್ಮ ಅವರು, ತಾವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಕ್ಷಣದಲ್ಲಿ ರಾಜ್ಯ ಸರ್ಕಾರ ತಕ್ಷಣಕ್ಕೆ ಸ್ಪಂದಿಸಿ ಅಭಿನಂದನೆ ಸಲ್ಲಿಸದೆ ಇರುವುದಕ್ಕೆ ಬಹಿರಂಗವಾಗಿ ಖೇದ ವ್ಯಕ್ತಪಡಿಸಿದ್ದರು. ಕ್ರೀಡಾಪಟುವಿನ ಈ ಬೇಸರದ ಬೆನ್ನಲ್ಲೇ, ಕೊಡಗಿನ ಶಾಸಕರು ಸ್ವತಃ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ, ಕ್ರೀಡಾಪಟುವಿನ ಬೆನ್ನಿಗೆ ನಿಂತಿರುವುದು ಕ್ರೀಡಾಭಿಮಾನಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂಥರ್ ಗೌಡ, ಪೂವಮ್ಮ ಅವರ ಈ ಅಪರೂಪದ ಸಾಧನೆ ಇಡೀ ಕೊಡಗು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯ. ಕ್ರೀಡಾಪಟುಗಳ ಸತತ ಪರಿಶ್ರಮ ಮತ್ತು ತ್ಯಾಗಕ್ಕೆ ಸೂಕ್ತ ಗೌರವ ಹಾಗೂ ನಿರಂತರ ಪ್ರೋತ್ಸಾಹ ಸಿಗಬೇಕಾದ ಅಗತ್ಯವಿದೆ ಎಂದು ಹೇಳಿದರು. ಭೇಟಿಯ ವೇಳೆ ಪೂವಮ್ಮ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಇದ್ದರು.
Topics

