ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಳದಲ್ಲೀಗ ನವರಾತ್ರಿಯ ಸಂಭ್ರಮ. ಕರ್ನಾಟಕ, ಕೇರಳ ಮಾತ್ರವಲ್ಲದೇ, ಇತರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೊಲ್ಲೂರಿಗೆ ಆಗಮಿಸುತ್ತಿದ್ದಾರೆ. ನವರಾತ್ರಿಯ ಸಂಭ್ರಮದಲ್ಲಿದ್ದ ವೇಳೆಯಲ್ಲಿ ಭಕ್ತಾಧಿಗಳ ಮೇಲೆ ಬೃಹತ್ ಗಾತ್ರದ ಲೈಟ್ವೊಂದು ಉರುಳಿ ಬಿದ್ದು, ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಕೊಲ್ಲೂರು ಮೂಕಾಂಬಿಕಾ ದೇವಿಯ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಮಹಡಿಗೆ ಬೃಹತ್ ಗಾತ್ರದ ಲೈಟ್ ಕಂಬವೊಂದನ್ನು ಅಳವಡಿಸಲಾಗಿತ್ತು. ನವರಾತ್ರಿಯ ಹಿನ್ನೆಲೆಯಲ್ಲಿ ಈ ವಿಶೇಷ ಲೈಟ್ ಸೆಟ್ಅಪ್ ಹಾಕಾಗಿತ್ತು,
ಆದರೆ ಒಮ್ಮೆ ಬೀಸಿದ ಗಾಳಿಯಿಂದಾಗಿ ಕಟ್ಟಡದ ಮೇಲಿದ್ದ ಲೈಟ್ ಉರುಳಿಬಿದ್ದಿದೆ. ಬಿಸಿಲಿನಿಂದ ರಕ್ಷಣೆ ಪಡೆಯುವ ಸಲುವಾಗಿ ಕಟ್ಟಡದ ನೆರಳಿನ ಅಡಿಯಲ್ಲಿ ನಿಂತಿದ್ದವರ ಮೇಲೆ ಬಿದ್ದ ಪರಿಣಾಮ ಮಕ್ಕಳು ಸೇರಿ 8 ರಿಂದ 10 ಭಕ್ತರ ಮೇಲೆ ಉರುಳಿ ಬಿದ್ದಿ ಆತಂಕ ಸೃಷ್ಟಿಯಾಯ್ತು.
ಲೈಟ್ ಕಂಬದ ಅಡಿಯಲ್ಲಿ ಸಿಲುಕಿಕೊಂಡಿದ್ದ ವೃದ್ದರೋರ್ವರನ್ನು ಸ್ಥಳೀಯರು ಹಾಗೂ 108 ಸಿಬ್ಬಂದಿಗಳ ಸಹಕಾರದಿಂದ ರಕ್ಷಿಸಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.