ಸಚಿವ ಸ್ಥಾನ ಕೈತಪ್ಪಿದರೂ ತಾಳ್ಮೆ ಮೆರೆದ ಮಂಕಾಳ ವೈದ್ಯ: ಕಾಂಗ್ರೆಸ್ ಹೈಕಮಾಂಡ್ ಗೆ ನಿಷ್ಠೆಯ ಪಾಠ
ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ಮಂಕಾಳ ವೈದ್ಯ ಅವರು ನಡೆದುಕೊಂಡ ರೀತಿ ಪ್ರಸ್ತುತ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
By ಅನಿಲ್ ಗುಂಡ್ಮಿ | Anil Gundmi
1 min read
ಕಾರವಾರ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟ ರಚನೆಯ ಸುತ್ತ ಅನೇಕ ರಾಜಕೀಯ ವಿದ್ಯಮಾನಗಳು ನಡೆದಿವೆ. ಹಲವು ಶಾಸಕರಿಗೆ ಸಚಿವ ಸ್ಥಾನ ಸಿಕ್ಕರೆ, ಇನ್ನು ಕೆಲವರಿಗೆ ಕೈತಪ್ಪಿದ್ದರಿಂದ ಬೆಂಬಲಿಗರ ಪ್ರತಿಭಟನೆ, ಶಾಸಕರ ಆಕ್ರೋಶ ಮತ್ತು ರಾಜೀನಾಮೆ ನೀಡುವ ಹಂತಕ್ಕೂ ಪರಿಸ್ಥಿತಿ ತಲುಪಿತ್ತು. ಆದರೆ, ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ಮಂಕಾಳ ವೈದ್ಯ ಅವರು ನಡೆದುಕೊಂಡ ರೀತಿ ಪ್ರಸ್ತುತ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಸಚಿವ ಸ್ಥಾನಕ್ಕಾಗಿ ಯಾವುದೇ ಪೈಪೋಟಿ ನಡೆಸದೆ, ತಮ್ಮ ಕ್ಷೇತ್ರ ಸೇವೆಯಲ್ಲಿ ನಿರತರಾಗಿದ್ದ ಮಂಕಾಳ ವೈದ್ಯ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಆರಂಭದಲ್ಲಿ ಸಚಿವರ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ನಂತರದ ವಿದ್ಯಮಾನಗಳಲ್ಲಿ ಅವರ ಹೆಸರು ಪಟ್ಟಿಯಿಂದ ಕೈತಪ್ಪಿತು. ಹೆಸರನ್ನು ಬಿಡಲು "ಟೈಪಿಂಗ್ ದೋಷ" (Typing mistake) ಎಂಬ ಕ್ಷುಲ್ಲಕ ಕಾರಣ ನೀಡಿದ್ದು ಬೆಂಬಲಿಗರಲ್ಲಿ ನಿರಾಶೆ ಮೂಡಿಸಿತು.
ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಕಾಳ ವೈದ್ಯ ಅವರು, "ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನಾನು ಕೆಲಸ ಮಾಡಲು ಬಂದವನೇ ಹೊರತು ಬರೀ ಮಾತನಾಡಲು ಅಲ್ಲ" ಎಂದು ಅತ್ಯಂತ ಸಂಯಮದಿಂದ ಹೇಳಿದ್ದಾರೆ.
ಸಚಿವ ಸ್ಥಾನ ಸಿಗಲಿಲ್ಲವೆಂದು ರಾಜೀನಾಮೆ ಹಂತಕ್ಕೆ ಹೋಗುವ ರಾಜಕಾರಣಿಗಳ ನಡುವೆ, ಹತ್ತಿರ ಬಂದು ಕೈತಪ್ಪಿದ ಅಧಿಕಾರವನ್ನು ತಾಳ್ಮೆಯಿಂದ ಸ್ವೀಕರಿಸಿದ ಅವರ ನಿಷ್ಠೆ ಮತ್ತು ಜನಸೇವೆಯ ಧೋರಣೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಸೂಕ್ತ ಸಚಿವ ಪ್ರಾತಿನಿಧ್ಯ ನೀಡದೆ, ಒಬ್ಬ ಜನಪ್ರಿಯ ನಾಯಕನಿಗೆ ಸಚಿವ ಸ್ಥಾನ ತಪ್ಪಿಸಿರುವುದು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಅಧಿಕಾರದ ಆಸೆಯಿಲ್ಲದೆ ಜನಸೇವೆಗೆ ತಾನು ಸದಾ ಬದ್ದ ಎನ್ನುತ್ತಲೇ ಬಂದಿರರುವ ಮಂಕಾಳ ವೈದ್ಯ ಅವರು ಘಟನೆಯ ಮೂಲಕ ಕರಾವಳಿ ಜನರ ಮನಸ್ಸಿನಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
Topics

