ಉಡುಪಿ: ಸರ್ಕಾರಿ ಅಕ್ಕಿ ಹೆಸರಿನಲ್ಲಿ ಬೆದರಿಕೆ ಹಾಕಿ ಸುಲಿಗೆಗೆ ಯತ್ನ: ಮೂವರು ಆರೋಪಿಗಳ ಬಂಧನ
ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಗುಜರಿ ವ್ಯಾಪಾರಿಯೊಬ್ಬರಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿರುವ ಘಟನೆ ಉಡುಪಿಯಲ್ಲಿ ನಡೆದಿದೆ
By Meghana Pranuth | ಮೇಘನಾ ಪ್ರಣೂತ್
1 min read
ಉಡುಪಿ: ಸರಕಾರಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಗುಜರಿ ವ್ಯಾಪಾರಿಯೊಬ್ಬರಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಅಕ್ಟೋಬರ್ 31ರಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಮತ್ತು ತನಿಖಾಧಿಕಾರಿ ಮಹಾಂತೇಶ ಜಾಬಗೌಡ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಗುಂಡ್ಮಿ ನಿವಾಸಿ ಹಾಗೂ ಗುಜರಿ ವ್ಯಾಪಾರಿಯಾಗಿರುವ ಜಿ. ಮೊಹಮ್ಮದ್ ಎಂಬುವವರು ದೂರುದಾರರು. ಸಚಿನ್ ಎಂಬಾತ ಮೊಹಮ್ಮದ್ ಅವರಿಗೆ ದೂರವಾಣಿ ಕರೆ ಮಾಡಿ, ಎರಡು ಚೀಲ ಅಕ್ಕಿಯನ್ನು ನಿಮ್ಮ ಮನೆ ಅಂಗಳದಲ್ಲಿ ಇರಿಸಿರುವುದಾಗಿ ತಿಳಿಸಿದ್ದ. ಬಳಿಕ ಮೊಹಮ್ಮದ್ ಅವರು ಮನೆಗೆ ಬಂದ ವೇಳೆ, ಸಚಿನ್ ರಿಕ್ಷಾದಲ್ಲಿ ಹಾಗೂ ನಾಗೇಂದ್ರ ಪುತ್ರನ್ ಹಾಗೂ ಸುಮಂತ್ ಕುಂದರ್ ಬೈಕ್ನಲ್ಲಿ ಅಲ್ಲಿಗೆ ಆಗಮಿಸಿದ್ದರು.
ಈ ವೇಳೆ ನಾಗೇಂದ್ರ ಪುತ್ರನ್ ತಾನು 'ಸಾಮಾಜಿಕ ಕಾರ್ಯಕರ್ತ' ಎಂದು ಪರಿಚಯಿಸಿಕೊಂಡು, ಮನೆಯ ಅಂಗಳದಲ್ಲಿದ್ದ ಅಕ್ಕಿ ಚೀಲಗಳ ದೃಶ್ಯವನ್ನು ಚಿತ್ರೀಕರಿಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಸರಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಪ್ರಕರಣದಿಂದ ತಪ್ಪಿಸಿಕೊಳ್ಳಬೇಕಾದರೆ ಆರಂಭದಲ್ಲಿ 2 ಲಕ್ಷ ರೂ. ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ದೂರುದಾರರು ತಿಳಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಕನಿಷ್ಠ 1 ಲಕ್ಷ ರೂ. ಆದರೂ ನೀಡಬೇಕು. ಇಲ್ಲದಿದ್ದರೆ ಜನರನ್ನು ಹಾಗೂ ತಮ್ಮ ಹುಡುಗರನ್ನು ಕರೆಸಿ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಂತರ ಮೊಹಮ್ಮದ್ ಅವರ ಮಕ್ಕಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ನಾಗೇಂದ್ರ ಪುತ್ರನ್ ಅಲಿಯಾಸ್ ನಾಗೇಂದ್ರ ಕೆ.ಕೆ. (37) ಹಾಗೂ ಪಿ. ಸುಮಂತ್ ಕುಂದರ್ (40) ಅವರನ್ನು ಸೆಪ್ಟೆಂಬರ್ 2ರಂದು ಮೈಸೂರು ಅರಮನೆ ಎದುರಿನ ವಸ್ತುಪ್ರದರ್ಶನ ಮೈದಾನದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಸಚಿನ್ ಶ್ರೀಯಾನ್ (32) ಎಂಬಾತನನ್ನು ಸೆಪ್ಟೆಂಬರ್ 1ರಂದೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯ ಬಂಧಿತ ಮೂವರನ್ನೂ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
Topics
ಸಂಬಂಧಿತ ಸುದ್ದಿಗಳು
udupi
ಕಾರ್ಕಳ: ಆಲ್ಟೋ ಕಾರಿಗೆ ಡಿಕ್ಕಿ ಹೊಡೆದು ಕಲ್ಲಂಗಡಿ ಲಾರಿ ಪಲ್ಟಿ: ಕಾರಿನಲ್ಲಿದ್ದವರು ಪವಾಡಸದೃಶ ಪಾರು
udupi
ನಾಡೋಜ ಡಾ.ಜಿ.ಶಂಕರ್ ಅವರಿಗೆ ಕಲಾಪೋಷಕ ಪ್ರಶಸ್ತಿ: ಸೆ.6ಕ್ಕೆ ಕಿರಾಡಿ ಉತ್ಸವ
udupi
ಉಡುಪಿ: ಪಶ್ಚಿಮ ಕರಾವಳಿಯಲ್ಲಿ ಕಡಲ ಅಬ್ಬರ – ಮೀನುಗಾರಿಕಾ ಬೋಟ್ ಮುಳುಗಡೆ , 7 ಮಂದಿ ರಕ್ಷಣೆ
udupi

