ನಾಡೋಜ ಡಾ.ಜಿ.ಶಂಕರ್ ಅವರಿಗೆ ಕಲಾಪೋಷಕ ಪ್ರಶಸ್ತಿ: ಸೆ.6ಕ್ಕೆ ಕಿರಾಡಿ ಉತ್ಸವ

ಯಕ್ಷ ನಕ್ಷತ್ರ ಟ್ರಸ್ಟ್‌ (ರಿ.), ಕಿರಾಡಿ, ಆವರ್ಸೆ ಇವರ ನೇತೃತ್ವದಲ್ಲಿ ,ಯಕ್ಷ ನಕ್ಷತ್ರ ಕಿರಾಡಿ ಉತ್ಸವ 2026, ಸೆ.6, ಭಾನುವಾರ ಮಂದಾರ್ತಿಯ ದುರ್ಗಾ ಸನ್ನಿಧಿ ಶೇಡಿಕೊಡ್ಲು ಇಲ್ಲಿ ನಡೆಯಲಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Kiradi Festival
Kiradi Festival

ಕುಂದಾಪುರ: ಯಕ್ಷ ನಕ್ಷತ್ರ ಟ್ರಸ್ಟ್‌ (ರಿ.), ಕಿರಾಡಿ, ಆವರ್ಸೆ ಇವರ ನೇತೃತ್ವದಲ್ಲಿ ,ಯಕ್ಷ ನಕ್ಷತ್ರ ಕಿರಾಡಿ ಉತ್ಸವ – 2026, ಸೆ.6, ಭಾನುವಾರ ಮಂದಾರ್ತಿಯ ದುರ್ಗಾ ಸನ್ನಿಧಿ ಶೇಡಿಕೊಡ್ಲು ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷ ನಕ್ಷತ್ರ ಪ್ರಶಸ್ತಿ, ಕಲಾ ಪೋಷಕ ಪ್ರಶಸ್ತಿ, ವಿದ್ಯಾನಿಧಿ ಗೌರವ, ಸಾಂಸ್ಕೃತಿಕ ವೈಭವ ನಡೆಯಲಿದೆ.

ಬೆಳಿಗ್ಗೆ 11.30ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ಪ್ರಮೋದ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ, ಕಲಾಪೋಷಕ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಯಿಂದ ಸಮಾರೋಪ ನಡೆಯಲಿದ್ದು, ಸಮಾರೋಪದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ ಆಳ್ವ ಅವರು ವಹಿಸಲಿದ್ದಾರೆ.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ.ಜಿ.ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್, ಪೆರ್ಡೂರು ಮೇಳದ ಯಜಮಾನರಾದ ವೈ.ಕರುಣಾಕರ ಶೆಟ್ಟಿ ಸೇರಿದಂತೆ ಶಾಸಕರು, ಉದ್ಯಮಿಗಳು, ಧಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ.

ಟ್ರಸ್ಟ್‌ ವತಿಯಿಂದ ನೀಡುವ ಕಲಾಪೋಷಕ ಪ್ರಶಸ್ತಿ-2026ನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷನಕ್ಷತ್ರ ಪ್ರಶಸ್ತಿ-2026ನ್ನು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಐರ್‌ಬೈಲ್ ಆನಂದ ಶೆಟ್ಟಿ ಅವರಿಗೆ ಪ್ರದಾನಿಸಲಾಗುವುದು.

ಈ ಸಾಲಿನ ಕಲಾಪೋಷಕ ಪ್ರಶಸ್ತಿಯನ್ನು ರಮೇಶ್ ಶೆಟ್ಟಿ, ಚಾರಾ ನಾಗಯ್ಯ ಶೆಟ್ಟಿ, ಶಂಭು ತಿಂಗಳಾಯ, ಪ್ರದೀಪ್ ಶೆಟ್ಟಿ, ರಮೇಶ ಕಾಂಚನ್, ಸುಮತಿ ಶೆಡ್ತಿ ಅವರಿಗೆ ನೀಡಲಾಗುವುದು. ಹಿರಿಯ ಪ್ರಸಂಗಕರ್ತ ರಮೇಶ್‌ ಮಂಜು ಕುಂಭಾಶಿ, ಹಿರಿಯ ಚಂಡೆ ವಾದಕರಾದ ಶಿವಾನಂದ ಕೋಟ, ಹಿರಿಯ ಹಾಸ್ಯ ಕಲಾವಿದರಾದ ರಮೇಶ್ ಭಂಡಾರಿ, ಮಹಮ್ಮದ್ ಗೌಸ್, ಮೊಳಹಳ್ಳಿ ಕೃಷ್ಣ, ಚಕ್ರಮೈದಾನ ಕೃಷ್ಣ ಅವರನ್ನು ಸನ್ಮಾನಿಸಲಾಗುವುದು.

ಮರಣೋತ್ತರವಾಗಿ ದಿ. ಕಣ್ಣಿಮನೆ ಗಣಪತಿ ಭಟ್ ರವರಿಗೆ ಗೌರವಾರ್ಪಣೆ ನಡೆಯಲಿದೆ. ಪ್ರತಿಭಾವಂತ ಕಲಾವಿದರಾದ ಪ್ರಸಂಗಕರ್ತ, ಯಕ್ಷಗುರು, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಭಾಗವತರಾದ ಕರುಣಾಕರ ಶೆಟ್ಟಿ ಪುರಂಧರ ಮೂಡ್ಕಣಿ, ವಿಜಯ ಬೀಜಮಕ್ಕಿ, ಕಾವ್ಯಶ್ರೀ ಅಜೇರು, ಸುನಿಲ್ ಹೊಲಾಡು ಅವರನ್ನು ಸನ್ಮಾನಿಸಲಾಗುವುದು.

ದಿ.ಹಳ್ಳಿ ರಾಮಚಂದ್ರ ಶಾಸ್ತ್ರಿ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ. ತೆಂಕು ಬಡಗಿನ ಏಳು ಜನ ಭಾಗವತರಿಂದ “ಸ್ವರ ಸಪ್ತಮಿ”, ಸ್ವರ ಮಾಧುರ್ಯ ನಡೆಯಲಿದೆ. ಭಾಗವತರುಗಳಾದ ಶ್ರೀರಕ್ಷಾ ಮೂಡುಬೆಳ್ಳೆ, ಬ್ರಹ್ಮೂರು, ಕಾನಗೋಡು, ಕನ್ನಡಿಕಟ್ಟೆ ಮೊಗೆಬೆಟ್ಟು, ಕಾವ್ಯಶ್ರೀ, ಕರ್ಕಿ, ಯಲ್ಲಾಪುರ, ಮಂದಾರ್ತಿ, ಹೆಗ್ಗಾರ್, ಪದ್ಯಾಣ, ಕೌಶಲ್, ಜೋಗಿ, ಮೂಡುಬಗೆ, ಕಲಾವಿದರಾಗಿ ಭಾಗವಹಿಸಲಿದ್ದಾರೆ.

ಬಳಿಕ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ “ಬಿಡುವನೇ ಬ್ರಹ್ಮಲಿಂಗ!” ನೃತ್ಯರೂಪಕ ಮತ್ತು ನೃತ್ಯ ವೈವಿಧ್ಯ ಪ್ರದರ್ಶನಗೊಳ್ಳಲಿದೆ. ನಂತರ ಯಕ್ಷನಕ್ಷತ್ರ ಟ್ರಸ್ಟ್ ಕಿರಾಡಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಕರ್ಣ ಕಥಾಮೃತ” ಎನ್ನುವ ಅದ್ದೂರಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಯಕ್ಷನಕ್ಷತ್ರ ಟ್ರಸ್ಟ್ ಮುಖ್ಯಸ್ಥರಾದ ಪ್ರಕಾಶ್ ಮೊಗವೀರ ಕಿರಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

Topics

ಸಂಬಂಧಿತ ಸುದ್ದಿಗಳು