Air India Flight : ವಿಮಾನ ಅಪಹರಣದ ಎಚ್ಚರಿಕೆ : ಏರ್ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಫ್ರಾಂಕ್ಫರ್ಟ್ನಿಂದ ದೆಹಲಿಗೆ ತೆರಳುತ್ತಿದ್ದ ಬೋಯಿಂಗ್ 787-9 ವಿಮಾನದ ಮೂಲಕ ನಿರ್ವಹಿಸಲ್ಪಡುತ್ತಿದ್ದ AI 2030 ಏರ್ ಇಂಡಿಯಾ ವಿಮಾನದ ಪೈಲಟ್ ವಿಮಾನ ಅಪಹರಣದ ಎಚ್ಚರಿಕೆ ನೀಡಿದ್ದಾರೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ನವದೆಹಲಿ : ಏರ್ ದುಬೈ ವಿಮಾನದಲ್ಲಿ ನಡೆದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಭಾರತದಲ್ಲಿ ಏರ್ ಇಂಡಿಯಾ ವಿಮಾನ ಅಪಹರಣಕ್ಕೆ ಯತ್ನ ನಡೆದಿದೆ. ಫ್ರಾಂಕ್ಫರ್ಟ್ - ದೆಹಲಿ ನಡುವೆ ಸಂಚಾರ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಇದೀಗ ಜೈಪುರದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ನೀಡಿರುವ ಮೂಲಗಳ ಪ್ರಕಾರ, ಫ್ರಾಂಕ್ಫರ್ಟ್ನಿಂದ ದೆಹಲಿಗೆ ತೆರಳುತ್ತಿದ್ದ ಬೋಯಿಂಗ್ 787-9 ವಿಮಾನದ ಮೂಲಕ ನಿರ್ವಹಿಸಲ್ಪಡುತ್ತಿದ್ದ AI 2030 ಏರ್ ಇಂಡಿಯಾ ವಿಮಾನದ ಪೈಲಟ್ ವಿಮಾನ ಅಪಹರಣದ ಎಚ್ಚರಿಕೆ ನೀಡಿದ್ದಾರೆ. ನಂತರ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಗಿದ್ದು, ಜೈಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿಮಾನವನ್ನು ಸೇಫ್ ಆಗಿ ಲ್ಯಾಂಡಿಂಗ್ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಹೊರತೆ ತರಲಾಗಿದ್ದು, ಅವರನ್ನು ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿರುವ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು ವಿಮಾನವನ್ನು ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ.
ಡಿಜಿಸಿಎ ನೀಡಿರುವ ಮಾಹಿತಿಯ ಪ್ರಕಾರ, ವಿಮಾನವು ಟ್ರಾನ್ಸ್ಪಾಂಡರ್ ಕೋಡ್ 7500' ಅನ್ನು ರವಾನಿಸುತ್ತಿತ್ತು. ವಿಮಾನದ ಅಪಹರಣ ಅಥವಾ ಇನ್ನು ಯಾವುದೇ ಕಾನೂನು ಬಾಹಿರ ಘಟನೆಗಳು ನಡೆದ ಸಂದರ್ಭದಲ್ಲಿ ಸೂಚಿಸುವ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದ ವಿಮಾನಯಾನದ ಸಂಕೇತವಾಗಿದೆ. ಮುಖ್ಯ ಪೈಲೆಟ್ PIC) ನೀಡಿದ ಎಚ್ಚರಿಕೆಯನ್ನು ಏರ್ ಟ್ರಾಫಿಕ್ ಕಂಟ್ರೋಲ್ (ATC) ಸ್ವೀಕಾರ ಮಾಡಿದ ಬೆನ್ನಲ್ಲೇ ವಿಮಾನವನ್ನು ಜೈಪುರ ಕಡೆಗೆ ತಿರುಗಿಸಲಾಗಿತ್ತು.
ಸದ್ಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ಇದೀಗ ತಪಾಸಣೆಗೆ ಒಳಪಡಿಸಲಾಗಿದೆ. ಅಧಿಕಾರಿಗಳು ವಿಮಾನ ಮತ್ತೆ ಹಾರಾಟಕ್ಕೆ ಅನುಮೋದನೆಯನ್ನು ನೀಡಿದ್ದು, ಶೀಘ್ರದಲ್ಲಿಯೇ ಪ್ರಯಾಣಿಕರು ವಿಮಾನವನ್ನು ಏರಲಿದ್ದಾರೆ ಎಂದು ಡಿಜಿಸಿಎ ಮಾಹಿತಿಯನ್ನು ನೀಡಿದೆ ಎಂದು ವರದಿಯಾಗಿದೆ.
Topics

