ಸಾರ್ವಜನಿಕ ರಸ್ತೆಗೆ ಹಾನಿ, ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಆರೋಪ : ಮುನಿಯಾಲು ವಿರುದ್ಧ ಕ್ರಮಕ್ಕೆ ಸುರೇಶ್​ ಶೆಟ್ಟಿ ಆಗ್ರಹ

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಕಾಮಗಾರಿಗಳಲ್ಲಿ ಸರ್ವಾಧಿಕಾರಿ ಧೋರಣೆ ತೋರುವ ಮೂಲಕ ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯುಂಟು ಮಾಡಿರುವ ಕಾಂಗ್ರೆಸ್​ ಮುಖಂಡ ಮುನಿಯಾಲು ಉದಯ್​ ಕುಮಾರ್ ಶೆಟ್ಟಿ ವಿರುದ್ಧ ಕಾನೂನು ಕ್ರಮಕ್ಕೆ ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಆಗ್ರಹಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಮೂಲಕ ಮುನಿಯಾಲು – ಪಡುಕೂಡುರು ಖಜಾನೆ ರಸ್ತೆ ನಿರ್ಮಾಣದ ಕಾಮಗಾರಿಯು ಪ್ರಶಾಂತ್​ ಶೆಟ್ಟಿ ಮೊಳಹಳ್ಳಿ ಎಂಬವರಿಗೆ ಲಭಿಸಿತ್ತು. 2 .50 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರಿ ಕಾಮಗಾರಿಗಳನ್ನು ಬೇರೆಯವರೆಗೆ ಬಿಟ್ಟುಕೊಡಲು ಇಚ್ಛಿಸದ ಉದಯ್​ಕುಮಾರ್​ ಶೆಟ್ಟಿ ಅಕ್ರಮವಾದಿ ಸದರಿ ರಸ್ತೆಯನ್ನು ಅಗೆದು ಕಾಮಗಾರಿ ಆರಂಭಿಸಿದ್ದಾರೆ. ಆದರೆ ಸರ್ಕಾರಿ ಇಂಜಿನಿಯರ್​​ ಈ ರಸ್ತೆಯ ಟೆಂಡರ್​ ಪಡೆದ ಪ್ರಶಾಂತ್​ಗೆ ನೋಟಿಸ್​ ನೀಡಿದ್ದಾರೆ. ಅಸಲಿಗೆ ಈ ರಸ್ತೆ ಅಕ್ರಮವಾಗಿ ಅಗೆದಿರುವುದು ಉದಯ್​ ಕುಮಾರ್​ ಶೆಟ್ಟಿ ಆಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುರೇಶ್​ ಶೆಟ್ಟಿ ಕಿಡಿಕಾರಿದ್ರು.

ಬೇರೆಯವರಿಗೆ ಮಂಜೂರಾದ ಟೆಂಡರ್​​ನಲ್ಲಿ ಉದಯ್​ಕುಮಾರ್​ ಶೆಟ್ಟಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ ? ಇದೊಂದು ಕಾನೂನುಬಾಹಿರ ಚಟುವಟಿಕೆಯಲ್ಲದೇ ಮತ್ತಿನ್ನೇನು ?ಇಂತಹ ದಬ್ಬಾಳಿಕೆ ನೀತಿಯು ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಸಾಗಿದೆ. ಉದಯ್​ ಕುಮಾರ್​ ಶೆಟ್ಟಿ ಬೇರೆ ಗುತ್ತಿಗೆದಾರರಿಗೆ ಬೆಳೆಯಲು ಬಿಡುತ್ತಿಲ್ಲ. ಸರ್ಕಾರಿ ಸ್ವತ್ತನ್ನು ಯಾರ ಅನುಮತಿ ಪಡೆಯದೇ ಈ ರೀತಿ ಹಾಳು ಮಾಡದರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸುರೇಶ್​ ಶೆಟ್ಟಿ ಹೇಳಿದರು.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ : ಮತ್ತೊಮ್ಮೆ ರಾಜ್ಯದಲ್ಲಿ ಜಾರಿಯಾಗಿದೆ 50% ಸಂಚಾರ ದಂಡ ವಿನಾಯಿತಿ ಆಫರ್

ಜಿಲ್ಲಾಡಳಿತವನ್ನು ನಿರಂತರವಾಗಿ ದುರ್ಬಳಕೆ ಮಾಡುತ್ತಲೇ ಬಂದಿರುವ ಉದಯ್​ ಕುಮಾರ್​ ಶೆಟ್ಟಿ ಜಲ್ಲಿ, ಮರಳು, ಕೆಂಪುಗಲ್ಲು ವ್ಯಾಪಾರಸ್ಥರ ಮೇಲೆ ಒಂದಿಲ್ಲೊಂದು ಕೇಸು ಹಾಕಿಸಿ ಅವರ ಜೀವನ ನರಕಸದೃಶವಾಗಿಸಿದ್ದಾರೆ. ಈಗ ಬೇರೆ ಗುತ್ತಿಗೆದಾರರಿಗೂ ಬದುಕಲು ಬಿಡುತ್ತಿಲ್ಲ. ಆದರೆ ಇವರ ಸರ್ವಾಧಿಕಾರಿ ಧೋರಣೆಗೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ದುರಂತ. ಹೀಗಾಗಿ ಲೋಕೋಪಯೋಗಿ ಇಲಾಖೆ ಈ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕೆಂದು ಆಗ್ರಹಿಸಿದ್ದಾರೆ.

Exit mobile version