ಜಗತ್ತಿನ ಸೃಷ್ಟಿಗೆ ಕಾರಣೀಭೂತಳಾದ ಆದಿಶಕ್ತಿಯನ್ನು ಒಂಬತ್ತು ದಿನಗಳ ಕಾಲ ನವದುರ್ಗೆಯ ರೂಪದಲ್ಲಿ ಆರಾಧಿಸುವ ನವರಾತ್ರಿಯ ಉತ್ಸವ ಈಗ ನಡೆಯುತ್ತದೆ. ಅಕ್ಟೋಬರ್ 11 ರಿಂದ ಪ್ರಾರಂಭವಾಗಿರುವ ಶರನ್ ನವರಾತ್ರಿಯ ಮೂರನೇ ದಿನವು ಚಂದ್ರಘಂಟಾ ದೇವಿಯನ್ನು ಆರಾಧಿಸುವ ದಿನವಾಗಿದೆ. ಆದಿಶಕ್ತಿಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ ದೇವಿಯು ಭಕ್ತರ ಕಷ್ಟಗಳನ್ನು ದೂರಮಾಡಿ, ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ತಮ್ಮನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆಯೂ ಇದೆ. ಚಂದ್ರಘಂಟಾ ದೇವಿಯ ಹಣೆಯ ಮೇಲೆ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಅದಕ್ಕಾಗಿಯೇ ದೇವಿಯನ್ನು ಚಂದ್ರಘಂಟಾ ಎಂದು ಕರೆಯುತ್ತಾರೆ.
ನವರಾತ್ರಿ 2026 ಮೂರನೇ ದಿನ
ದಿನಾಂಕ : ಮಂಗಳವಾರ, ಅಕ್ಟೋಬರ್ 13, 2026
ನವರಾತ್ರಿ ದಿನ : ಮೂರನೇ ದಿನ
ಪೂಜಿಸುವ ದೇವಿ : ಚಂದ್ರಘಂಟಾ
ಮಹತ್ವ : ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರತೀಕ
ಬಣ್ಣ : ಕೆಂಪು
ನೈವೇದ್ಯ : ಹಾಲಿನಿಂದ ತಯಾರಿಸಿದ ಖೀರ್
ಚಂದ್ರಘಂಟಾ ದೇವಿಯ ರೂಪ ಹೇಗಿದೆ?
ಚಂದ್ರಘಂಟಾ ದೇವಿಯು ಶಾಂತ ಸ್ವಭಾವದ ಶಕ್ತಿಶಾಲಿ ರೂಪವನ್ನು ಹೊಂದಿದ್ದಾಳೆ. ಅವಳಿಗೆ ಹತ್ತು ಕೈಗಳಿದ್ದು, ಪ್ರತಿಯೊಂದರಲ್ಲೂ ಆಯುಧಗಳನ್ನು ಹಿಡಿದಿದ್ದಾಳೆ. ಅವಳ ವಾಹನ ಸಿಂಹ. ಇವೆಲ್ಲವೂ ಧೈರ್ಯದ ಸಂಕೇತ. ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿರುವ ಭಯ ದೂರವಾಗಿ ಧೈರ್ಯ ಮತ್ತು ಸ್ಥೈರ್ಯ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಚಂದ್ರಘಂಟಾ ದೇವಿ ಪೌರಾಣಿಕ ಕಥೆ
ಹಿಂದಿನ ಜನ್ಮದಲ್ಲಿ ಸತಿಯಾಗಿ ಮೃತಪಟ್ಟ ನಂತರ ಆದಿಶಕ್ತಿಯು ಹಿಮವಂತ ಮತ್ತು ಮೇನಾವತಿಯ ಮಗಳಾಗಿ ದೇವಿ ಪಾರ್ವತಿ ಜನಿಸುತ್ತಾಳೆ. ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆಯಲ ಕಠಿಣ ತಪಸ್ಸು ಮಾಡುತ್ತಾಳೆ. ತಪಸ್ಸಿಗೆ ಮೆಚ್ಚಿದ ಶಿವನು ವಿವಾಹಕ್ಕೆ ಒಪ್ಪುತ್ತಾನೆ. ಆದರೆ ಶಿವನು ಮದುವೆಯ ಮೆರವಣಿಗೆಯಲ್ಲಿ ತನ್ನ ಭೂತ, ಗಣಗಳನ್ನು ಕೂಡಿದ ಭೀಕರ ರೂಪದೊಂದಿಗೆ ಬರುತ್ತಾನೆ. ಇದನ್ನು ನೋಡಿದ ಪಾವರ್ತಿಯ ತಾಯಿ ಮೇನಾವತಿ ಮೂರ್ಛೆ ಹೋಗುತ್ತಾಳೆ. ಈ ಪರಿಸ್ಥಿತಿಯನ್ನು ಶಾಂತಗೊಳಿಸಲು ದೇವಿ ಪಾರ್ವತಿಯು ತನ್ನ ಉಗ್ರ ತೇಜಸ್ಸಿನ ಚಂದ್ರಘಂಟಾ ರೂಪವನ್ನು ತಾಳಿ ಶಿವನನ್ನು ಸೌಮ್ಯ ರೂಪಕ್ಕೆ ಮರಳುವಂತೆ ಪ್ರಾರ್ಥಿಸುತ್ತಾಳೆ. ಆಗ ಶಿವನು ಸುಂದರ ವರನ ರೂಪ ತಾಳುತ್ತಾನೆ. ನಂತರ ಶಿವ–ಪಾರ್ವತಿಯರ ವಿವಾಹ ನೆರವೇರುತ್ತದೆ. ಇದರ ಪ್ರತೀಕವಾಗಿ ನವರಾತ್ರಿಯ ಮೂರನೇ ದಿನವನ್ನು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ.