ಆದಿಶಕ್ತಿಯ ಎಂಬತ್ತು ರೂಪಗಳನ್ನು ಪೂಜಿಸುವ ನವರಾತ್ರಿ ಉತ್ಸವ ಪ್ರಾರಂಭವಾಗಿ ಐದು ದಿನ ಪೂರ್ಣವಾಗಿದೆ. ಈ ಐದು ದಿನದಲ್ಲಿ ಮೊದಲನೇ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡ ದೇವಿ ಹಾಗೂ ಐದನೇ ದಿನ ಸ್ಕಂದಮಾತಾ ದೇವಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದಾರೆ. ನವರಾತ್ರಿಯ 6ನೇ ದಿನದಂದು ಮಾತೆ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಮಾತೆ ಕಾತ್ಯಾಯನಿಯನ್ನು ಪೂಜಿಸುವುದರಿಂದ ಭಕ್ತರು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಫಲಗಳನ್ನು ಪಡೆಯುತ್ತಾರೆ. ಜೊತೆಗೆ ಎಲ್ಲ ಪಾಪಗಳು ನಾಶವಾಗುತ್ತವೆ.
ನವರಾತ್ರಿ 2026 : 6ನೇ ದಿನ
ದಿನಾಂಕ : ಶುಕ್ರವಾರ, ಅಕ್ಟೋಬರ್ 16, 2026
ನವರಾತ್ರಿ ದಿನ : ಆರನೇ ದಿನ
ಪೂಜಿಸುವ ದೇವಿ : ಕಾತ್ಯಾಯನಿ ದೇವಿ
ಮಹತ್ವ : ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ಉತ್ತಮ ಫಲ ಸಿಗುತ್ತದೆ
ಬಣ್ಣ : ಹಸಿರು
ನೈವೇದ್ಯ : ಜೇನುತುಪ್ಪ
ಕಾತ್ಯಾಯನಿ ದೇವಿ ಯಾರು?
ಕಾತ್ಯಾಯನಿಯು ದುರ್ಗಾ ದೇವಿಯ ಅತ್ಯಂತ ಶಕ್ತಿಶಾಲಿಯಾದ ವೀರಾಗ್ರಣಿಯ ಅವತಾರವಾಗಿದೆ. ಪುರಾಣಗಳ ಪ್ರಕಾರ ದುರ್ಗಾ ದೇವಿಯು ರಾಕ್ಷಸ ಮಹಿಷಾಸುರನ್ನು ಸೋಲಿಸಿದ ನಂತರ ಒಳ್ಳೆಯ ಮತ್ತು ಕೆಟ್ಟದರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಕಾತ್ಯಾಯನಿ ದೇವಿಯ ರೂಪವನ್ನು ತಾಳಿದಳು. ಆದ್ದರಿಂದ ಈ ಸಮಯದಲ್ಲಿ ಅವಳನ್ನು ಪೂಜಿಸುವುದರಿಂದ ನಮ್ಮಲ್ಲಿರುವ ಕೆಟ್ಟ ಗುಣಗಳು ದೂರವಾಗಿ ಸದಾಚಾರ ನೆಲೆಸುತ್ತದೆ. ಇನ್ನೊಂದು ಕಥೆಯ ಪ್ರಕಾರ ಋಷಿ ಕಾತ್ಯಾಯನನು ದುರ್ಗಾದೇವಿಯನ್ನು ಕುರಿತು ತಪಸ್ಸು ಮಾಡಿದಾಗ, ತಪಸ್ಸಿಗೆ ಮೆಚ್ಚಿ ದೇವಿ ಪ್ರತ್ಯಕ್ಷಳಾದಳು. ಈ ಕಾರಣದಿಂದಲೂ ದೇವಿಯನ್ನು ಕಾತ್ಯಾಯನಿ ಎಂದು ಕರೆಯಲಾಗುತ್ತದೆ.
ಕಾತ್ಯಾಯನಿ ದೇವಿಯ ರೂಪ ಹೇಗಿದೆ?
ಮಾತೆ ಕಾತ್ಯಾಯನಿಯು ಸಿಂಹದ ಮೇಲೆ ಸವಾರಿ ಮಾಡುತ್ತ ಧೈರ್ಯವನ್ನು ಮೆರೆದಿದ್ದಾಳೆ. ಅವಳು ದುಷ್ಟರನ್ನು ನಾಶಮಾಡುವ ಸಂಕೇತವಾಗಿ ಕತ್ತಿಯನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡು ಕೈಯಲ್ಲಿ ಹಿಡಿದಿದ್ದಾಳೆ. ದೇವಿಯ ದೈವಿಕ ರೂಪವು ಧೈರ್ಯ, ದೃಢಸಂಕಲ್ಪ ಮತ್ತು ಸದಾಚಾರದ ರಕ್ಷಣೆಯನ್ನು ಬಿಂಬಿಸುತ್ತದೆ.