ಪಿತೃ ಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಗೆ ಏಕಿಷ್ಟು ಮಹತ್ವ ? ಉಪವಾಸ ವ್ರತಾಚರಣೆ ಮತ್ತು ಪಾರಣ ಸಮಯ
ಪಿತೃ ಪಕ್ಷದ ಸಮಯದಲ್ಲಿ ಬರುವ ಅತ್ಯಂತ ಮಹತ್ವದ ಏಕಾದಶಿಯಿದು. ಇಂದಿರಾ ಏಕಾದಶಿ ಉಪವಾಸವನ್ನು ಹೆಣ್ಣುಮಕ್ಕಳೂ ಆಚರಿಸಬಹುದಾ? ಪುರಾಣ ಹೇಳುವುದೇನು?
By Archana V Bhat | ಅರ್ಚನಾ ವಿ ಭಟ್
1 min read
ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಗೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾವಿಷ್ಣುವಿಗೆ ಸಮರ್ಪಿತವಾದ ದಿನವಾಗಿದೆ. ಅದರಲ್ಲೂ ವೈಷ್ಣವ ಪರಂಪರೆಯಲ್ಲಿ ಏಕಾದಶಿಗೆ ಬಹಳ ಮಹತ್ವ ನೀಡಲಾಗಿದೆ. ಇದು ವಿಷ್ಣುವಿಗಾಗಿ ಮಾಡುವ ಕೇವಲ ಉಪವಾಸದ ದಿನವಷ್ಟೇ ಅಲ್ಲ, ಶ್ರೀಹರಿಯ ಸ್ಮರಣೆ ಮಾಡುತ್ತಾ ಅವನ ಭಕ್ತಿಯಲ್ಲಿಯೇ ಲೀನವಾಗುವ ದಿನ. ಒಂದು ಸಂವತ್ಸರದಲ್ಲಿ ಬರುವ ಎಲ್ಲ 24 ಏಕಾದಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿವೆ. ಅದರಂತೆಯೇ ಇಂದಿರಾ ಏಕಾದಶಿಯೂ ಮಹತ್ವದ್ದಾಗಿದೆ.
ವೈದಿಕ ಪಂಚಾಂಗದ ಪ್ರಕಾರ ಪ್ರತಿ ವರ್ಷ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯನ್ನು ಇಂದಿರಾ ಏಕಾದಶಿ ಎಂದು ಆಚರಿಸಲಾಗುತ್ತದೆ. ಇದು ಪಿತೃ ಪಕ್ಷದ ಸಮಯದಲ್ಲಿ ಬರುವ ಅತ್ಯಂತ ಮಹತ್ವದ ಏಕಾದಶಿಯಾಗಿದೆ. ಇಂದಿರಾ ಏಕಾದಶಿಯಂದು ಯಾರು ಉಪವಾಸವನ್ನು ಆಚರಿಸಬಹುದು? ಹೆಣ್ಣುಮಕ್ಕಳೂ ಇದನ್ನು ಆಚರಿಸಬಹುದಾ ಎಂದು ನೋಡೋಣ.
ಇಂದಿರಾ ಏಕಾದಶಿ ಯಾವಾಗ?
ಆಶ್ವಯುಜ ಮಾಸದ ಕೃಷ್ಣ ಪಕ್ಷದ ಏಕಾದಶಿಯ ತಿಥಿಯು ಅಕ್ಟೋಬರ್ 6 ರಂದು ಬೆಳಿಗ್ಗೆ 02:07 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಕ್ಟೋಬರ್ 7 ರಂದು ಬೆಳಿಗ್ಗೆ 12:34 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಈ ಬಾರಿ ಇಂದಿರಾ ಏಕಾದಶಿ ಉಪವಾಸವನ್ನು ಅಕ್ಟೋಬರ್ 6 ರಂದು ಆಚರಿಸಲಾಗುತ್ತದೆ. ಮರುದಿನ ಅಂದರೆ ದ್ವಾದಶಿ ತಿಥಿಯಂದು ಉಪವಾಸವನ್ನು ಅಂತ್ಯಗೊಳಿಸಲಾಗುತ್ತದೆ.
ಇಂದಿರಾ ಏಕಾದಶಿ ಪಾರಣ ಸಮಯ
ಇಂದಿರಾ ಏಕಾದಶಿಯ ಉಪವಾಸವು ಅಕ್ಟೋಬರ್ 7 ರಂದು ಕೊನೆಗೊಳ್ಳುತ್ತದೆ. ಉಪವಾಸವನ್ನು ಕೊನೆಗೊಳಿಸಲು ಶುಭ ಸಮಯವೆಂದರೆ ಅಕ್ಟೋಬರ್ 7 ರಂದು ಬೆಳಿಗ್ಗೆ 6:17 ರಿಂದ 8:38 ರವರೆಗೆ. ದೇವಸ್ಥಾನಕ್ಕೆ ಬೇಟಿ ನೀಡಿ. ನಿರ್ಗತಿಕರಿಗೆ ಆಹಾರ, ಬಟ್ಟೆ, ದಾನ ಮಾಡಿ. ಇದರಿಂದ ನಿಮ್ಮ ಜೀವನವು ಕಷ್ಟಗಳಿಂದ ಮುಕ್ತವಾಗಿರುತ್ತದೆ.
ಇಂದಿರಾ ಏಕಾದಶಿಯ ಧಾರ್ಮಿಕ ಮಹತ್ವ
ಪಿತೃಪಕ್ಷದ ಸಮಯದಲ್ಲಿ ಬರುವ ಇಂದಿರಾ ಏಕಾದಶಿಗೆ ವಿಶೇಷ ಸ್ಥಾನವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನದಿಂದು ಉಪವಾಸ ವ್ರತವನ್ನು ಆಚರಿಸುವುದರಿಂದ ಪೂರ್ವಜರಿಗೆ ಮೋಕ್ಷ ಲಭಿಸುತ್ತದೆ. ನರಕದಲ್ಲಿ ಬಳಲುತ್ತಿರುವ ಪೂರ್ವಜರಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಗರುಡ ಪುರಾಣದ ಪ್ರಕಾರ ಗಂಡು ಮಕ್ಕಳು ಇಲ್ಲದ ಮನೆಗಳಲ್ಲಿ ಮಗಳು ತಮ್ಮ ಪೂರ್ವಜರ ಆತ್ಮಗಳ ಶಾಂತಿಗಾಗಿ ಇಂದಿರಾ ಏಕಾದಶಿ ಉಪವಾಸ ವ್ರತವನ್ನು ಸಹ ಆಚರಿಸಬಹುದು.
Topics

