ಇಂದಿನ ದಿನಗಳಲ್ಲಿ ಸದ್ದಿಲ್ಲದೇ ನಮ್ಮ ದೇಹ ಆವರಿಸುತ್ತಿರುವುದರಲ್ಲಿ ಕೊಲೆಸ್ಟ್ರಾಲ್ (Cholesterol) ಕೂಡಾ ಒಂದು. ದೇಹದ ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ಕೊಬ್ಬಿನ ವಸ್ತು ಇದಾಗಿದೆ. ಇದು ಪ್ರತಿಯೊಬ್ಬರ ದೇಹದಲ್ಲೂ ಇರುತ್ತದೆ. ಆದರೆ ಅದು ಹೆಚ್ಚಾದಾಗ ಮಾತ್ರ ಅಪಾಯಕ್ಕೆ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ಗಳಲ್ಲಿ ಪ್ರಮುಖವಾಗಿ ಎರಡು ವಿಧ. ಎಲ್ಡಿಎಲ್ ಮತ್ತು ಎಚ್ಡಿಎಲ್. ಎಲ್ಡಿಎಲ್ ಎನ್ನುವುದು ಕೆಟ್ಟ ಕೊಲೆಸ್ಟ್ರಾಲ್. ಎಚ್ಡಿಎಲ್ ಎನ್ನುವುದು ಉತ್ತಮ ಕೊಲೆಸ್ಟ್ರಾಲ್. ಕೊಲೆಸ್ಟ್ರಾಲ್ ಹೆಚ್ಚಾದರೆ ಮಾತ್ರ ಹೃದಯದ ಕಾಯಿಲೆ ಬರುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವ ವಿಚಾರ. ಆದರೆ ಇದು ಸಂಪೂರ್ಣವಾಗಿ ನಿಜವಲ್ಲ. ಹೃದಯದ ಕಾಯಿಲೆಗೆ ಕೊಲೆಸ್ಟ್ರಾಲ್ ಒಂದೇ ಕಾರಣವಲ್ಲ. ಇತರ ಕಾರಣಗಳಿಂದಲೂ ಹೃದಯದ ಕಾಯಿಲೆ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾದ್ರೆ ಅವು ಯಾವುವು? ಅದಕ್ಕೆ ಪರಿಹಾರವೇನು? ಎಂದು ನೋಡೋಣ.
ಹೃದಯ ಕಾಯಿಲೆಗೆ ಕಾರಣಗಳೇನು?
ಆರೋಗ್ಯ ತಜ್ಞರ ಪ್ರಕಾರ ಹೃದಯದ ಕಾಯಿಲೆಗೆ ಕೊಲೆಸ್ಟ್ರಾಲ್ ಒಂದೇ ಕಾರಣವಲ್ಲ. ಧೂಮಪಾನ, ನಿದ್ರೆಯ ಕೊರತೆ, ದೈಹಿಕ ಚಟುವಟಿಕೆಯ ಕೊರತೆ, ರಕ್ತದೊತ್ತಡ ಮತ್ತು ಮಧುಮೇಹದಂತಹ ಅನೇಕ ಅಂಶಗಳು ಕೂಡಾ ಹೃದಯಾಘಾತಕ್ಕೆ ಕಾರಣವಾಗಿದೆ. ಆದ್ದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೇವಲ ಕೊಲೆಸ್ಟ್ರಾಲ್ ಒಂದನ್ನು ಮಾತ್ರ ನಿಯಂತ್ರಣದಲ್ಲಿಟ್ಟುಕೊಂಡರೆ ಸಾಕಾಗುವುದಿಲ್ಲ, ಜೀವನಶೈಲಿಯೂ ಉತ್ತಮವಾಗಿರಬೇಕು. ಹೊಟ್ಟೆಯ ಸುತ್ತಲೂ ಸಂಗ್ರಹವಾಗುವ ಒಳಾಂಗಣ ಕೊಬ್ಬು ದೇಹದಲ್ಲಿ ದೀರ್ಘಕಾಲಿನ ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಯ ಅಪಾಯ ಹೆಚ್ಚುತ್ತದೆ. ಇದೇ ರೀತಿ ಕಳಪೆ ನಿದ್ದೆ, ಚಟುವಟಿಕೆಯಿಲ್ಲದಿರುವುದು, ಅಸಮರ್ಪಕ ತೂಕ ನಿರ್ವಹಣೆ ಇವೆಲ್ಲವುಗಳು ಹೃದಯಾಘಾತದ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಇದನ್ನೂ ಓದಿ: ಆರೋಗ್ಯದ ಹಿತದೃಷ್ಟಿಯಿಂದ ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು? ಇಲ್ಲಿದೆ ವೈದ್ಯಕೀಯ ಜಾಗೃತಿ ಮಾಹಿತಿ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ
* ಆರೋಗ್ಯಕರ ಆಹಾರ: ತಾಜಾ ಹಣ್ಣು, ತರಕಾರಿ ಮತ್ತು ಒಮೆಗಾ–3 ಕೊಬ್ಬಿನಾಮ್ಲಗಳನ್ನು ಹೆಚ್ಚೆಚ್ಚು ಸೇವಿಸಿ.
* ಕಡ್ಡಾಯವಾಗಿ ವ್ಯಾಯಾಮ ಮಾಡಿ: ವಾರದಲ್ಲಿ ಕನಿಷ್ಠ 150 ನಿಮಿಷಗಳ ವ್ಯಾಯಾಮ ಮಾಡಿ. ವೇಗದ ನಡಿಗೆ, ಸೈಕ್ಲಿಂಗ್ ಹೀಗೆ ಯಾವುದಾದರೂ ಒಂದನ್ನು ಆಯ್ದುಕೊಳ್ಳಿ.
* ತೂಕ ನಿಯಂತ್ರಿಸಿ : ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
* ಒತ್ತಡ ಕಡಿಮೆ ಮಾಡಿಕೊಳ್ಳಿ : ಯೋಗ, ಧ್ಯಾನ ಮತ್ತು ಉತ್ತಮ ನಿದ್ದೆಯ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಿ.
* ನಿಯಮಿತ ತಪಾಸಣೆ : ಮಧುಮೇಹ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ.
