ಹೃದಾಯಾಘಾತ ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಹೆದರಿಕೆ ಹುಟ್ಟಿಸಿರುವ ಮಾರಾಣಾಂತಿಕ ಕಾಯಿಲೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಪುರುಷ, ಮಹಿಳೆಯೆಂಬ ಭೇದವೂ ಇಲ್ಲ. ಇದ್ದಕ್ಕಿದ್ದಂತೆ ಮರಣ ಶಾಸನ ಬರೆಯುತ್ತದೆ. ಸಾಮಾನ್ಯವಾಗಿ ಹೃದಯಾಘಾತ ಎಂದ ತಕ್ಷಣ ಎದೆನೋವು, ಉಸಿರಾಟದ ತೊಂದರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದುಕೊಂಡಿದ್ದಾರೆ. ಆದರೆ ಈ ಲಕ್ಷಣಗಳಷ್ಟೇ ಅಲ್ಲ, ಇದರ ಹೊರತಾಗಿಯೂ ವಿಭಿನ್ನ ಲಕ್ಷಣಗಳು ಹೃದಯಾಘಾತದ ಸೂಚನೆಯನ್ನು ನೀಡುತ್ತದೆ ಎಂದು ತಜ್ಷರು ಹೇಳುತ್ತಾರೆ. ಅದರಲ್ಲೂ ಮಹಿಳೆಯರಲ್ಲಿ 4 ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅದನ್ನು ನಿರ್ಲಕ್ಷಿಸಬಾರದು ಎಂದೂ ತಜ್ಞರು ಸಲಹೆ ನೀಡಿದ್ದಾರೆ. ಆ ಲಕ್ಷಣಗಳು ಯಾವುವು ಎಂದು ನೋಡೋಣ.
ಎದೆಯಲ್ಲಿ ಭಾರ
ಹೃದಾಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆ ನೋವು ಎಂದು ತಿಳಿದುಕೊಂಡವರೇ ಹೆಚ್ಚು. ಆದರೆ ಕೇವಲ ಎದೆ ನೋವಷ್ಟೇ ಅಲ್ಲ, ಎದೆ ಭಾರವೂ ಒಂದು ಮುಖ್ಯ ಲಕ್ಷಣ. ಆಗಾಗ ಎದೆ ಭಾರವೆನಿಸುವುದು, ಒತ್ತಡ, ಎದೆ ಹಿಸುಕಿದಂತಹ ಅನುಭವ ಇವೆಲ್ಲವೂ ಹೃದಯಾಘಾತದ ಮುನ್ನೆಚ್ಚರಿಕೆಗಳು. ಮಹಿಳೆಯರಲ್ಲಿ ಈ ಲಕ್ಷಣಗಳು ಕಂಡುಬರುವುದು ಹೆಚ್ಚು.
ದೇಹದ ಭಾಗಗಳಲ್ಲಿ ನೋವು
ಮಹಿಳೆರಲ್ಲಿ ಹೃದಯಕ್ಕೆ ಸಂಬಂಧಿಸದ ಭಾಗಗಳಲ್ಲಿಯೂ ನೋವು ಕಾಣಿಸಿಕೊಳ್ಳಬಹುದು. ದವಡೆ, ಕುತ್ತಿಗೆ, ಕೈಗಳು, ಹೊಟ್ಟೆ ಮತ್ತು ಕೆಲವೊಮ್ಮೆ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಮಹಿಳೆಯರ ಜೊತೆಗೆ ಕುಟುಂಬ ಸದಸ್ಯರು ಕೂಡಾ ಸಾಮಾನ್ಯ ನೋವು ಎಂದು ನಿರ್ಲಕ್ಷಿಸಿಬಿಡುತ್ತಾರೆ. ಆದರೆ ಇದು ಕೂಡಾ ಹೃದಯಾಘಾತದ ಎಚ್ಚರಿಕೆಯಾಗಿದೆ. ಈ ಭಾಗಗಳಲ್ಲಿ ನೋವು ಕಾಣಿಸಿಕೊಂಡಾಗ ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಹೃದಯ ತಜ್ಞರು ಸಲಹೆ ನೀಡಿದ್ದಾರೆ.
ಬೆವರು, ವಾಂತಿ ಮತ್ತು ತಲೆತಿರುಗುವಿಕೆ
ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ವಿಶಿಷ್ಟವಾಗಿರುತ್ತವೆ. ಕೆಲವು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಬೆವರು, ವಾಂತಿ, ತಲೆತಿರುಗುವಿಕೆ, ತಲೆನೋವು ಮತ್ತು ಆಗಾಗ ಚಳಿಯ ಅನುಭವ ಈ ಲಕ್ಷಣಗಳು ಹೃದಯಕ್ಕೆ ನೇರವಾಗಿ ಸಂಬಂಧಿಸಿಲ್ಲವಾದರೂ ಇವು ಎಚ್ಚರಿಕೆಯ ಸಂಕೇತಗಳಾಗಿವೆ. ಇವುಗಳನ್ನು ಲಘುವಾಗಿ ತೆಗೆದುಕೊಳ್ಳುವುದಾಗಲಿ ಅಥವಾ ನಿರ್ಲಕ್ಷಿಸುವುದಾಗಲಿ ಮಾಡಬಾರದು. ಈ ಲಕ್ಷಣಗಳು ಮಾನಸಿಕ ಒತ್ತಡ, ಪಿತ್ತ, ವಯೋಸಹಜದ ಲಕ್ಷಣಗಳು ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ ಈ ಲಕ್ಷಣಗಳು ಕಾಣಿಸಿಕೊಂಡರೆ ಇದರ ಬಗ್ಗೆ ಗಮನ ಕೊಡಿ ಎಂದು ವೈದ್ಯರ ಸಲಹೆ ನೀಡಿದ್ದಾರೆ.