ಮಾವು ತಿಂದರೆ ದಪ್ಪವಾಗುತ್ತೀರಾ? ತೂಕ ಹೆಚ್ಚಳ ಸಾಧ್ಯತೆ ಇದಿಯಾ? ತಜ್ಞರು ಹೇಳಿದ ನಿಜಾಂಶ!

ಮಾವಿನ ಹಣ್ಣಿನಲ್ಲಿ ಸಕ್ಕರೆ ಹೆಚ್ಚಿದೆ ಎಂಬ ಕಾರಣಕ್ಕೆ ಹಲವರು ದೂರ ಇಡುತ್ತಾರೆ. ಆದರೆ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ತೂಕ ಹೆಚ್ಚುವುದಿಲ್ಲ ಎಂದು ಪೌಷ್ಟಿಕ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಬೇಸಿಗೆ ಬಂದರೆ ಸಾಕು, ಮಾವಿನ ಹಣ್ಣಿನ ಸುವಾಸನೆ ಮತ್ತು ರುಚಿ ಎಲ್ಲರ ಮನ ಸೆಳೆಯುತ್ತದೆ. ಆದರೆ ಮಾವು ತಿಂದರೆ ತೂಕ ಹೆಚ್ಚುತ್ತದೆ ಎಂಬ ನಂಬಿಕೆ ಹಲವರಲ್ಲಿ ಇನ್ನೂ ಇದೆ. ಇದರಿಂದ ಕೆಲವರು ತಮ್ಮ ನೆಚ್ಚಿನ ಹಣ್ಣನ್ನು ತಿನ್ನಲು ಕೂಡ ಹಿಂದೇಟು ಹಾಕುತ್ತಾರೆ.

ಪೌಷ್ಟಿಕ ತಜ್ಞರ ಪ್ರಕಾರ, ಮಾವಿನ ಹಣ್ಣು ಮಾತ್ರವೇ ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ. ವಾಸ್ತವವಾಗಿ ಮಾವಿನ ಹಣ್ಣಿನಲ್ಲಿರುವ ಕ್ಯಾಲೊರಿಗಳ ಪ್ರಮಾಣ ಅನೇಕರು ಅಂದುಕೊಳ್ಳುವಷ್ಟು ಹೆಚ್ಚಿಲ್ಲ. ಜೊತೆಗೆ ಇದರಲ್ಲಿ ಉತ್ತಮ ಪ್ರಮಾಣದ ನಾರಿನಾಂಶ (ಫೈಬರ್) ಇದ್ದು, ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ಉಳಿಸಲು ಸಹಾಯ ಮಾಡುತ್ತದೆ.

ಆದರೆ ಸಮಸ್ಯೆ ಮಾವಿನ ಹಣ್ಣಿನಲ್ಲಲ್ಲ, ಅದನ್ನು ಸೇವಿಸುವ ವಿಧಾನದಲ್ಲಿದೆ. ಮಾವಿನ ಜ್ಯೂಸ್, ಮಿಲ್ಕ್‌ಶೇಕ್, ಐಸ್‌ಕ್ರೀಮ್, ಆಮ್‌ರಸ್ ಅಥವಾ ವಿವಿಧ ಸಿಹಿತಿಂಡಿಗಳ ರೂಪದಲ್ಲಿ ಸೇವಿಸಿದಾಗ ಹೆಚ್ಚುವರಿ ಸಕ್ಕರೆ, ಹಾಲು ಹಾಗೂ ಕ್ರೀಮ್ ಸೇರುವುದರಿಂದ ಕ್ಯಾಲೊರಿಗಳ ಪ್ರಮಾಣ ಹೆಚ್ಚಾಗುತ್ತದೆ. ಇದೇ ತೂಕ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ.

ತಜ್ಞರು ಮಾವನ್ನು ಸಾಧ್ಯವಾದಷ್ಟು ಅದರ ನೈಸರ್ಗಿಕ ರೂಪದಲ್ಲೇ ತಿನ್ನುವಂತೆ ಸಲಹೆ ನೀಡುತ್ತಾರೆ. ಹಣ್ಣನ್ನು ನೇರವಾಗಿ ಸೇವಿಸಿದರೆ ಅದರಲ್ಲಿರುವ ಫೈಬರ್ ದೇಹಕ್ಕೆ ಸಂಪೂರ್ಣವಾಗಿ ದೊರೆಯುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವೂ ಏಕಾಏಕಿ ಏರಿಕೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಮಾವಿನ ಹಣ್ಣನ್ನು ಕೆಲವು ಬಾದಾಮಿ, ಗೋಡಂಬಿ ಅಥವಾ ಇತರ ಡ್ರೈಫ್ರೂಟ್ಸ್‌ಗಳೊಂದಿಗೆ ಸೇವಿಸಿದರೆ ಇನ್ನಷ್ಟು ಲಾಭ ಸಿಗುತ್ತದೆ. ಇಂತಹ ಸಂಯೋಜನೆ ಹಸಿವು ನಿಯಂತ್ರಿಸಲು ಸಹಾಯ ಮಾಡುತ್ತದೆ. ವ್ಯಾಯಾಮಕ್ಕೂ ಮುನ್ನ ಅಥವಾ ಊಟದ ನಂತರ ಸಣ್ಣ ಪ್ರಮಾಣದಲ್ಲಿ ಮಾವನ್ನು ಸೇವಿಸುವುದು ಉತ್ತಮ ಆಯ್ಕೆಯಾಗಬಹುದು.

ಮಧುಮೇಹ ಇರುವವರು ಕೂಡ ಮಾವನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಆದರೆ ಪ್ರಮಾಣದ ಮೇಲೆ ಗಮನವಿರಬೇಕು. ವೈದ್ಯರ ಸಲಹೆಯಂತೆ ನಿಯಂತ್ರಿತ ಪ್ರಮಾಣದಲ್ಲಿ ಸೇವಿಸಿದರೆ ಮಾವಿನ ಹಣ್ಣಿನ ರುಚಿಯ ಜೊತೆಗೆ ಪೌಷ್ಟಿಕಾಂಶದ ಪ್ರಯೋಜನವನ್ನೂ ಪಡೆಯಬಹುದು.

ಒಟ್ಟಿನಲ್ಲಿ, ಮಾವಿನ ಹಣ್ಣು ತೂಕ ಹೆಚ್ಚಿಸುವ ಆಹಾರ ಎಂಬ ಕಲ್ಪನೆ ಸಂಪೂರ್ಣ ಸತ್ಯವಲ್ಲ. ಎಷ್ಟು ತಿನ್ನುತ್ತೇವೆ ಮತ್ತು ಯಾವ ರೂಪದಲ್ಲಿ ಸೇವಿಸುತ್ತೇವೆ ಎಂಬುದೇ ಮುಖ್ಯ. ಮಿತ ಪ್ರಮಾಣದಲ್ಲಿ ಸಂಪೂರ್ಣ ಹಣ್ಣಾಗಿ ಸೇವಿಸಿದರೆ ಮಾವಿನ ಸೀಸನ್ ಅನ್ನು ಯಾವುದೇ ಆತಂಕವಿಲ್ಲದೆ ಆನಂದಿಸಬಹುದು.

Exit mobile version