ಅನ್ಲಾಗ್ ಪನ್ನೀರ್, ಚೀಸ್, ಬೆಣ್ಣೆ ಬ್ಯಾನ್ : ನಕಲಿ ಹಾಲು ಉತ್ಪನ್ನಗಳ ವಿರುದ್ಧ ಸಮರ
ದೇಹಕ್ಕೆ ಪ್ರೊಟೀನ್ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಪನೀರ್ ಸೇವಿಸುತ್ತಾರೆ. ಆದರೆ ಇಂತಹ ನಕಲಿ ಉತ್ಪನ್ನಗಳಿಂದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ. ಈ
ಮುಂಬೈ : ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳು ನಕಲಿ ಹಾಲಿನ ಉತ್ಪನ್ನಗಳ ವಿರುದ್ಧ ಅತ್ಯಂತ ಕಠಿಣವಾದ ಸಮರವನ್ನು ಸಾರಿವೆ. ಮಾರುಕಟ್ಟೆಯಲ್ಲಿ ಅಸಲಿ ಉತ್ಪನ್ನಗಳ ಹೆಸರಿನಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ 'ಅನಲಾಗ್ ಪನೀರ್' ಮಾರಾಟವನ್ನು ಈ ಎರಡೂ ರಾಜ್ಯಗಳು ಸಂಪೂರ್ಣವಾಗಿ ನಿಷೇಧಿಸಿವೆ.
ಸಾಮಾನ್ಯವಾಗಿ ಪನೀರ್ ಮತ್ತು ಚೀಸ್ ಅನ್ನು ಶುದ್ಧವಾದ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ ಈ ಅನಲಾಗ್ ಉತ್ಪನ್ನಗಳು ಹಾಲಿನಿಂದ ಮಾಡಿದ್ದಲ್ಲ. ಬದಲಾಗಿ, ಇವುಗಳನ್ನು ಸಸ್ಯಜನ್ಯ ಕೊಬ್ಬು, ಪಾಮ್ ಆಯಿಲ್ ಹಾಗೂ ವಿವಿಧ ರೀತಿಯ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಕೃತಕವಾಗಿ ಸಿದ್ಧಪಡಿಸಲಾಗುತ್ತದೆ. ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಇವು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಎಂದು ಸಾಬೀತಾಗಿದೆ.
ಈ ಹಿಂದೆ ಕೃತಕ ಪನೀರ್ ಬಳಸುವಾಗ ಅದು ಅನಲಾಗ್ ಎಂದು ಗ್ರಾಹಕರಿಗೆ ಕಡ್ಡಾಯವಾಗಿ ತಿಳಿಸಬೇಕೆಂಬ ನಿಯಮವಿತ್ತು. ಆದರೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಈ ನಿಯಮವನ್ನು ಗಾಳಿಗೆ ತೂರಿ, ಅಸಲಿ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ನೀಡುತ್ತಿದ್ದವು. ಈ ಕಾರಣದಿಂದಾಗಿ ಮಹಾರಾಷ್ಟ್ರ ಸರ್ಕಾರವು ಒಂದು ವರ್ಷದ ಅವಧಿಗೆ ಇದರ ಬಳಕೆಯನ್ನು ನಿಷೇಧಿಸಿದೆ.
ಇತ್ತ ಗುಜರಾತ್ ಸರ್ಕಾರವು ಪನೀರ್ ಮಾತ್ರವಲ್ಲದೆ ಕೃತಕ ಚೀಸ್ ಮತ್ತು ಬೆಣ್ಣೆಯನ್ನೂ ಸಹ ಅನಿರ್ದಿಷ್ಟಾವಧಿಗೆ ನಿರ್ಬಂಧಿಸಿದೆ. ದೇಶದಲ್ಲೇ ಇಂತಹ ನಿಷೇಧ ತಂದ ಮೊದಲ ರಾಜ್ಯ ಛತ್ತೀಸ್‌ಗಢ ಆಗಿದೆ. ಈ ಕಟ್ಟುನಿಟ್ಟಿನ ನಿಯಮವನ್ನು ಉಲ್ಲಂಘಿಸುವ ಹೋಟೆಲ್‌ಗಳು, ಕ್ಲೌಡ್ ಕಿಚನ್ ಹಾಗೂ ಕೇಟರಿಂಗ್ ಮಾಲೀಕರಿಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿಗಳ ದಂಡ ಹಾಗೂ ಜೀವಾವಧಿ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲಾಗಿದೆ.
ದೇಹಕ್ಕೆ ಪ್ರೊಟೀನ್ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಪನೀರ್ ಸೇವಿಸುತ್ತಾರೆ. ಆದರೆ ಇಂತಹ ನಕಲಿ ಉತ್ಪನ್ನಗಳಿಂದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ನೆರೆರಾಜ್ಯಗಳ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಇಂತಹ ಕೃತಕ ಹಾಗೂ ಆರೋಗ್ಯಕ್ಕೆ ಮಾರಕವಾಗಿರುವ ಅನಲಾಗ್ ಪನೀರ್ ಅನ್ನು ತಕ್ಷಣವೇ ನಿಷೇಧಿಸಬೇಕು ಎಂಬ ಬಲವಾದ ಒತ್ತಾಯವು ಆಹಾರ ತಜ್ಞರು ಮತ್ತು ಸಾರ್ವಜನಿಕ ವಲಯದಿಂದ ಈಗ ಕೇಳಿಬರುತ್ತಿದೆ.
ಏನಿದು ಅನ್ಲಾಗ್ ಪನ್ನೀರ್ ಅಥವಾ ಚೀಸ್ ?
ಅಷ್ಟಕ್ಕೂ ಏನಿದು ಅನ್ಲಾಗ್ ಪನ್ನೀರ್ ಅಥವಾ ಚೀಸ್ ಅಂದ್ರೆ, ಹಾಲಿನ ಬದಲು ಬೇರೆ ಬೇರೆ ರಾಸಾಯನಿಕಗಳು, ಸಸ್ಯಜನ್ಯ ಎಣ್ಣೆ (Vegetable oil), ಸ್ಟಾರ್ಚ್ (Starch) ಮತ್ತು ಹಾಲಿನ ಪುಡಿಗಳನ್ನು ಬಳಸಿ ತಯಾರಿಸುವ ಕೃತಕ ಉತ್ಪನ್ನವೇ ಈ ಅನ್ಲಾಗ್ ಪನ್ನೀರ್ ಅಥವಾ ಚೀಸ್.
ನೋಡುವುದಕ್ಕೆ ಮಾತ್ರವಲ್ಲ ರುಚಿಯಲ್ಲಿಯೂ ಯಾವುದೇ ವ್ಯತ್ಯಾಸ ಇರೋದಿಲ್ಲ. ಅಷ್ಟೇ ಯಾಕೆ ಮುಟ್ಟಲು ಇದು ಅಸಲಿ ಪನ್ನೀರ್/ಚೀಸ್ ರೀತಿಯಲ್ಲೇ ಇರುತ್ತದೆ. ಹೀಗಾಗಿ ಸಾಮಾನ್ಯ ಗ್ರಾಹಕರಿಗೆ ಇದರ ವ್ಯತ್ಯಾಸವನ್ನು ಕಂಡುಹಿಡಿಯುವುದು ಬಹಳ ಕಷ್ಟವಾಗುತ್ತದೆ.
ನಿಷೇಧಕ್ಕೆ ಪ್ರಮುಖ ಕಾರಣಗಳೇನು ? ಆರೋಗ್ಯದ ಮೇಲೆ ದುಷ್ಪರಿಣಾಮ
ಸಾಮಾನ್ಯವಾಗಿ ಪನ್ನೀರ್‌ನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಆದರೆ, ಅನ್ಲಾಗ್ ಪನ್ನೀರ್‌ನಲ್ಲಿ ಪೋಷಕಾಂಶಗಳ ಬದಲು ಟ್ರಾನ್ಸ್ ಫ್ಯಾಟ್ (Trans fat) ಹಾಗೂ ಕಳಪೆ ಮಟ್ಟದ ಎಣ್ಣೆಯಂಶ ಇರುತ್ತದೆ. ಈ ಅಂಶ ಹೊಂದಿರುವ ಪನ್ನೀರ್ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ, ಬೊಜ್ಜು ಹೆಚ್ಚಾಗುವ ಅಪಾಯ ಇರುತ್ತದೆ.
ಗ್ರಾಹಕರಿಗೆ ವಂಚನೆ: ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ನಕಲಿ ಉತ್ಪನ್ನಗಳು ಸಿಗೋದ್ರಿಂದಾಗಿ ಕೆಲವು ಮಾರಾಟಗಾರರು 'ಅಸಲಿ ಪನ್ನೀರ್' ಎಂದು ಹೇಳಿ ದುಬಾರಿ ಬೆಲೆಗೆ ಮಾರಾಟ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ.
ರೈತರಿಗೆ ಹೊಡೆತ: ಕೃತಕ ಉತ್ಪನ್ನಗಳ ಹಾವಳಿಯಿಂದ ಅಸಲಿ ಹಾಲು ಉತ್ಪಾದಿಸುವ ಡೈರಿ ರೈತರ ಆದಾಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ಗ್ರಾಹಕರು ಏನು ಮಾಡಬೇಕು ?
ಮಾರುಕಟ್ಟೆಯಲ್ಲಿ ಪನ್ನೀರ್, ಚೀಸ್ ಅಥವಾ ಬೆಣ್ಣೆಯನ್ನು ಖರೀದಿಸುವಾಗ ಪ್ಯಾಕೆಟ್ ಮೇಲಿರುವ ಲೇಬಲ್ ಅನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು. ಅದರಲ್ಲಿ 'Analogue', 'Non-dairy' ಅಥವಾ 'Vegetable fat' ಎಂದು ಬರೆದಿದೆಯಾ ಅಂತಾ ಚೆಕ್ ಮಾಡಿ ಒಂದೊಮ್ಮೆ ಹೀಗೆ ಬರೆದಿದ್ರೆ ಅದು ಪಕ್ಕಾ ನಕಲಿ ಉತ್ಪನ್ನ ಅನ್ನೋದು ನೆನಪಿರಲಿ.
ಮನೆಯಲ್ಲಿ ಬಳಕೆ ಮಾಡುವ ಪನ್ನೀರ್ ಅಥವಾ ಚೀಸ್ ಬ್ರ್ಯಾಂಡೆಡ್ ಅಥವಾ ನಂಬಿಕಾರ್ಹ ಡೈರಿಗಳಿಂದಲೇ ಉತ್ಪನ್ನಗಳನ್ನು ಖರೀದಿಸಿ. ಬಿಡಿಯಾಗಿ (Loose) ಸಿಗುವ ಉತ್ಪನ್ನಗಳಲ್ಲಿ ಕಲಬೆರಕೆ ಸಾಧ್ಯತೆ ಹೆಚ್ಚು.ಹೋಟೆಲ್‌ಗಳಲ್ಲಿ ಪನ್ನೀರ್ ಖಾದ್ಯಗಳನ್ನು ಸೇವಿಸುವಾಗ ಅದರ ಮೃದುತ್ವ ಹಾಗೂ ರುಚಿಯ ಬಗ್ಗೆಯೂ ಗಮನ ಇರಲಿ.
ನಕಲಿ ಪನ್ನೀರ್ ಪತ್ತೆ ಹಚ್ಚುವುದು ಹೇಗೆ ?
ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಈ ನಕಲಿ ಪನ್ನೀರ್ ಅನ್ನು ಪತ್ತೆ ಹೆಚ್ಚಬಹುದಾಗಿದೆ. ಈ ಸರಳ ವಿಧಾನವನ್ನು ಅನುಸರಿಸುವ ಮೂಲಕ ನಕಲಿ ಉತ್ಪನ್ನಗಳನ್ನು ಪತ್ತೆ ಹಚ್ಚಿ.
ಬಿಸಿ ನೀರಿನ ಪರೀಕ್ಷೆ: ಪನ್ನೀರ್ ತುಂಡನ್ನು ಬಿಸಿ ನೀರಿನಲ್ಲಿ ಹಾಕಿ. ನಕಲಿ ಪನ್ನೀರ್ ಆಗಿದ್ದರೆ, ಅದು ರಬ್ಬರ್‌ನಂತೆ ಎಳೆಯಲು ಬರುತ್ತದೆ ಮತ್ತು ಒಡೆಯುವುದಿಲ್ಲ.
ಅಯೋಡಿನ್ ಟೆಸ್ಟ್: ಪನ್ನೀರ್ ಅನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ಮೇಲೆ ಅದಕ್ಕೆ 2-3 ಹನಿ ಅಯೋಡಿನ್ (Iodine tincture) ಹಾಕಿ. ಪನ್ನೀರ್ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಕೃತಕ 'ಸ್ಟಾರ್ಚ್' ಬೆರೆಸಲಾಗಿದೆ ಅನ್ನೋದು ಖಚಿತ.
ರುಚಿ ಮತ್ತು ವಾಸನೆ: ಅಸಲಿ ಪನ್ನೀರ್ ಹಾಲಿನ ತಾಜಾ ವಾಸನೆ ಹೊಂದಿರುತ್ತದೆ ಹಾಗೂ ಮೃದುವಾಗಿರುತ್ತದೆ. ನಕಲಿ ಪನ್ನೀರ್ ಯಾವುದೇ ನೈಸರ್ಗಿಕ ವಾಸನೆ ಹೊಂದಿರುವುದಿಲ್ಲ ಮತ್ತು ಸ್ವಲ್ಪ ಗಟ್ಟಿಯಾಗಿರುತ್ತದೆ.
Topics

