'ವಿಮಲ್' ಜಾಹೀರಾತು: 15 ದಿನಗಳಲ್ಲಿ ಉತ್ತರಿಸುವಂತೆ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನೋಟಿಸ್

ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲಾ ಉತ್ಪಾದನೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

By Suma G | ಸುಮಾ ಜಿ.

1 min read

WhatsAppPost
Shahrukh Khan Ajay Devgan and Tiger Shroff
Photo: Internet

ಹೆಸರಿನಲ್ಲಿ ಪರೋಕ್ಷವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಮಹಾರಾಷ್ಟ್ರದ ಆಹಾರ ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ತುಕಾರಾಂ ಮುಂಡೆ ಅವರು ಆಗಸ್ಟ್ 11 ರಂದು ಈ ಒಂಬತ್ತು ಪುಟಗಳ ನೋಟಿಸ್ ನೀಡಿದ್ದಾರೆ. ಈ ಕೂಡಲೇ ಜಾಹೀರಾತು ಅಭಿಯಾನದಿಂದ ಹಿಂದೆ ಸರಿಯಬೇಕು ಮತ್ತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಂದ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಚಾರದ ತುಣುಕುಗಳನ್ನು ತೆಗೆದುಹಾಕಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, 15 ದಿನಗಳ ಒಳಗಾಗಿ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿದ್ದಾರೆ.

ನೋಟಿಸ್‌ನಲ್ಲಿರುವ ಪ್ರಮುಖ ಅಂಶಗಳು:

  • ಪರೋಕ್ಷ ಪ್ರಚಾರದ ಆರೋಪ: ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲಾ ಉತ್ಪಾದನೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, 'ವಿಮಲ್ ಏಲಕ್ಕಿ' ಹೆಸರಿನಲ್ಲಿ ಜಾಹೀರಾತು ನೀಡಿರುವುದು ಗ್ರಾಹಕರನ್ನು ದಿಕ್ಕುತಪ್ಪಿಸುವಂತಿದೆ ಮತ್ತು ಇದು ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರವಾಗಿದೆ (Surrogate promotion) ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

  • ಭಾರಿ ದಂಡ ಮತ್ತು ನಿಷೇಧದ ಎಚ್ಚರಿಕೆ: ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ, ಈ ರೀತಿಯ ತಪ್ಪು ದಾರಿಗೆಳೆಯುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೆ ನಟರಿಗೆ 10 ಲಕ್ಷದಿಂದ 50 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದು. ಅಲ್ಲದೆ, ಯಾವುದೇ ಉತ್ಪನ್ನಗಳನ್ನು ಪ್ರಚಾರ ಮಾಡದಂತೆ ಅವರ ಮೇಲೆ 3 ವರ್ಷಗಳವರೆಗೆ ನಿಷೇಧ ಹೇರುವ ಅವಕಾಶವೂ ಕಾನೂನಿನಲ್ಲಿದೆ.

  • ದಾಖಲೆ ಸಲ್ಲಿಕೆಗೆ ಸೂಚನೆ: ನಟರು ಮಾಡಿಕೊಂಡಿರುವ ಜಾಹೀರಾತು ಒಪ್ಪಂದದ ಸಂಪೂರ್ಣ ಪ್ರತಿಗಳು, ಸಂಭಾವನೆ ಅಥವಾ ಪಾವತಿಯ ವಿವರಗಳು ಹಾಗೂ ಇತರ ಅಗತ್ಯ ದಾಖಲೆಗಳನ್ನು ಒದಗಿಸುವಂತೆಯೂ ಎಫ್‌ಡಿಎ ಸೂಚಿಸಿದೆ.

2022ರಲ್ಲಿ ಕ್ಷಮೆಯಾಚಿಸಿದ್ದ ಅಕ್ಷಯ್ ಕುಮಾರ್: 2022 ರಲ್ಲಿ ಇದೇ 'ವಿಮಲ್ ಏಲಕ್ಕಿ' ಜಾಹೀರಾತಿನಲ್ಲಿ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರೊಂದಿಗೆ ನಟ ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಂಡಿದ್ದರು. ತಂಬಾಕು/ಪಾನ್ ಮಸಾಲಾ ಉತ್ಪನ್ನವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಮತ್ತು ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜೊತೆಗೆ ಈ ಜಾಹೀರಾತಿನಿಂದ ಬಂದ ಸಂಭಾವನೆಯನ್ನು ಸತ್ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿ, ಆ ಬ್ರ್ಯಾಂಡ್‌ನಿಂದ ಹಿಂದೆ ಸರಿದಿದ್ದರು.

Topics

ಸಂಬಂಧಿತ ಸುದ್ದಿಗಳು