ಪ್ರಜ್ವಲ್ ರೇವಣ್ಣ ಜೈಲು ರಾದ್ಧಾಂತಕ್ಕೆ ಬಿಗ್ ಟ್ವಿಸ್ಟ್: ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ಸಾಥ್?

ಪ್ರಜ್ವಲ್ ರೇವಣ್ಣ ಹಲವು ತಿಂಗಳುಗಳಿಂದ ಜೈಲಿನಲ್ಲಿ ಮೊಬೈಲ್ ಬಳಸುತ್ತಿದ್ದರು , ಇದಕ್ಕೆ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಸಾಥ್ ನೀಡುತ್ತಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
prajwal revanna
prajwal revanna

ಬೆಂಗಳೂರು (ಆಗಸ್ಟ್ 13): ಪರಪ್ಪನ ಅಗ್ರಹಾರ ಮಧ್ಯವರ್ತಿ ಕಾರಾಗೃಹದ ಮೇಲೆ ಸಿಸಿಬಿ (CCB) ಅಧಿಕಾರಿಗಳು ನಡೆಸಿದ ದಿಢೀರ್ ದಾಳಿ ವೇಳೆ ಮಾಜಿ ಸಂಸದ, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಈ ಅಕ್ರಮ ಮೊಬೈಲ್ ಬಳಕೆಯ ಹಿಂದೆ ಜೈಲಾಧಿಕಾರಿಗಳ ಹಸ್ತಕ್ಷೇಪ ಹಾಗೂ ನೆರವು ಇರುವುದು ಬೆಳಕಿಗೆ ಬಂದಿದೆ.

ಪ್ರಜ್ವಲ್ ರೇವಣ್ಣ ಹಲವು ತಿಂಗಳುಗಳಿಂದ ಜೈಲಿನಲ್ಲಿ ಮೊಬೈಲ್ ಬಳಸುತ್ತಿದ್ದರು ಎನ್ನಲಾಗಿದ್ದು, ಇದಕ್ಕೆ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಸಾಥ್ ನೀಡುತ್ತಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.

ದಾಳಿ ನಡೆಸಲು ಸಿಸಿಬಿ ಅಧಿಕಾರಿಗಳು ಆಗಮಿಸಿದಾಗಲೆಲ್ಲಾ ಅವರನ್ನು ಒಳಗೆ ಬಿಡಲು ಈರಣ್ಣ ಸುಮಾರು 15 ರಿಂದ 20 ನಿಮಿಷ ತಡ ಮಾಡುತ್ತಿದ್ದರು. ಈ ಸಮಯವನ್ನು ಬಳಸಿಕೊಂಡು ಜೈಲಿನಲ್ಲಿದ್ದ ಕೈದಿಗಳು ತಮ್ಮ ಬಳಿಯಿದ್ದ ಮೊಬೈಲ್ ಹಾಗೂ ನಿಷೇಧಿತ ವಸ್ತುಗಳನ್ನು ಅಡಗಿಸಿಡುತ್ತಿದ್ದರು. ಆದರೆ, ಇತ್ತೀಚಿನ ದಾಳಿಯ ವೇಳೆ ಸಿಸಿಬಿ ಅಧಿಕಾರಿಗಳು ಈರಣ್ಣ ಅವರ ಮಾತಿಗೆ ಕಿವಿಗೊಡದೆ ನೇರವಾಗಿ ಒಳನುಗ್ಗಿದ ಪರಿಣಾಮ ಪ್ರಜ್ವಲ್ ರೇವಣ್ಣ ಬ್ಯಾರಕ್ ಸೇರಿದಂತೆ ಹಲವೆಡೆ ಮೊಬೈಲ್‌ಗಳು ಸಿಕ್ಕಿಬಿದ್ದಿವೆ. ಕರ್ತವ್ಯ ಲೋಪ ಹಾಗೂ ಅಕ್ರಮಕ್ಕೆ ನೆರವಾದ ಹಿನ್ನೆಲೆಯಲ್ಲಿ ಈರಣ್ಣ ರಂಗಾಪುರ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಸಿಸಿಬಿ ದಾಳಿ ವೇಳೆ ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಜೊತೆಗೆ ಒಂದು ನೋಟ್‌ಬುಕ್ ಕೂಡ ಜಪ್ತಿ ಮಾಡಿಕೊಳ್ಳಲಾಗಿದೆ. ಈ ನೋಟ್‌ಬುಕ್‌ನಲ್ಲಿ 30ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಬರೆದಿಡಲಾಗಿತ್ತು.

ತಾಯಿ ಭವಾನಿ ರೇವಣ್ಣ ಅವರ ನಂಬರ್ ಅನ್ನು ‘ಪಾರ್ವತಿ’ ಎಂದು, ತಂದೆ ಹೆಚ್.ಡಿ. ರೇವಣ್ಣ ಅವರ ನಂಬರ್ ಅನ್ನು ‘ಶಿವಪ್ಪ’ ಎಂದು ಮರೆಮಾಚಿ ಬರೆದಿಡಲಾಗಿತ್ತು.ಜೊತೆಗೆ ಅವರ ಆಪ್ತ ಸ್ನೇಹಿತೆಯರ ನಂಬರ್‌ಗಳು ಈ ಡೈರಿಯಲ್ಲಿ ಕಂಡುಬಂದಿವೆ.

ಪತ್ತೆಯಾಗಿರುವ ಮೊಬೈಲ್‌ನ ಪಾಸ್‌ವರ್ಡ್ ನೀಡಲು ಪ್ರಜ್ವಲ್ ರೇವಣ್ಣ ನಿರಾಕರಿಸಿದ್ದಾರೆ. "ಈ ಮೊಬೈಲ್ ನನ್ನದಲ್ಲ, ಇದು ನನ್ನ ಬ್ಯಾರಕ್‌ಗೆ ಹೇಗೆ ಬಂತು ಎಂಬುದು ನನಗೂ ಗೊತ್ತಿಲ್ಲ" ಎಂದು ಅಧಿಕಾರಿಗಳ ಮುಂದೆ ಪ್ರಜ್ವಲ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಸದ್ಯ ಜಪ್ತಿ ಮಾಡಲಾದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು