ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ : ಜೈಲಿನಲ್ಲೇ ಕುಳಿತು ಅಶ್ಲೀಲ ಸಿನಿಮಾ ವೀಕ್ಷಣೆ
ವಿಶೇಷ ಅಧಿಕಾರಿಗಳ ತಂಡವು ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ, ಪ್ರಜ್ವಲ್ ರೇವಣ್ಣ ತಂಗಿದ್ದ ಸೆಲ್‌ನ ಹಾಸಿಗೆಯ ಕೆಳಗೆ ಸ್ಮಾರ್ಟ್‌ಫೋನ್ ಮತ್ತು ಚಾರ್ಜರ್ ಪತ್ತೆಯಾಗಿದೆ.
ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಮೇಲೂ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಕ್ರಮ ಚಟುವಟಿಕೆಗಳು ನಿಂತಿಲ್ಲ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಜೈಲಿನಲ್ಲಿ ರಾಜಾರೋಷವಾಗಿ ನಿಷೇಧಿತ ಆಂಡ್ರಾಯ್ಡ್ ಮೊಬೈಲ್ ಮತ್ತು ಪೆನ್ ಡ್ರೈವ್ ಬಳಸುತ್ತಿದ್ದ ಅವರ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ಭರ್ಜರಿ ದಾಳಿ ನಡೆಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಕಾರಾಗೃಹದ ಇಲಾಖೆಯ ಸುರಕ್ಷಾ ವ್ಯವಸ್ಥೆಯ ಅಸಲಿ ಮುಖವಾಡ ಕಳಚಿ ಬಿದ್ದಂತಾಗಿದೆ.
ವಿಶೇಷ ಅಧಿಕಾರಿಗಳ ತಂಡವು ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ, ಪ್ರಜ್ವಲ್ ರೇವಣ್ಣ ತಂಗಿದ್ದ ಸೆಲ್‌ನ ಹಾಸಿಗೆಯ ಕೆಳಗೆ ಸ್ಮಾರ್ಟ್‌ಫೋನ್ ಮತ್ತು ಚಾರ್ಜರ್ ಪತ್ತೆಯಾಗಿದೆ. ಮೂಲಗಳ ಪ್ರಕಾರ, ವಶಪಡಿಸಿಕೊಳ್ಳಲಾದ ಮೊಬೈಲ್‌ನಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿದ್ದವು. ಜೊತೆಗೆ ಒಟಿಟಿ ತಂತ್ರಾಂಶಗಳನ್ನು ಬಳಸಿ ಸಿನಿಮಾ ಹಾಗೂ ನೂರಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ. ಈ ಮೂಲಕ ಪ್ರಜ್ವಲ್ ಜೈಲಿನಲ್ಲಿದ್ದರೂ ಹೊರಜಗತ್ತಿನ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಈ ಹಠಾತ್ ದಾಳಿಯ ಬೆನ್ನಲ್ಲೇ ಜೈಲಿನ ಒಳಗಿನ 'ವಿಐಪಿ ಸಂಸ್ಕೃತಿ' ಮತ್ತು ಭ್ರಷ್ಟಾಚಾರದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇರ ಆದೇಶ ಹಾಗೂ ಸಿಎಂ ಅನುಮತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕರ್ತವ್ಯ ಲೋಪವೆಸಗಿದ ಜೈಲಿನ ಸಹಾಯಕ ಅಧೀಕ್ಷಕರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಅಲ್ಲದೆ ಜೈಲು ನಿಯಮ ಉಲ್ಲಂಘನೆಗಾಗಿ ಪ್ರಜ್ವಲ್ ಮತ್ತು ಅವರ ಸಹಕೈದಿಯ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಲಾಗಿದೆ.
ಶಿಸ್ತು ಕ್ರಮದ ಭಾಗವಾಗಿ ಪ್ರಜ್ವಲ್ ರೇವಣ್ಣ ಅವರನ್ನು ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದ್ದು, ಕಡ್ಡಾಯವಾಗಿ ಜೈಲಿನ ಸಮವಸ್ತ್ರ ಧರಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಹೈಪ್ರೊಫೈಲ್ ದಾಳಿಯು ಜೈಲು ಸಿಬ್ಬಂದಿಗಳ ಶಾಮೀಲಾತಿಯನ್ನು ಸಾಬೀತುಪಡಿಸಿದ್ದು, ಸರ್ಕಾರವು ಇಡೀ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.
Topics

