ರಾಜ್ಯದಲ್ಲಿ 1 ವರ್ಷ ಗುಟ್ಖಾ, ಪಾನ್ ಮಸಾಲಾ ನಿಷೇಧ : ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು
ಪಾನ್ ಮಸಾಲಾದಲ್ಲಿ ನಿಷೇಧಿತ ನಶೆ ಪದಾರ್ಥಗಳನ್ನು ಬೆರೆಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವಿರುವ ಗುಟ್ಖಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಷೇಧ ಹೇರಿ ಮಹತ್ವದ ಆದೇಶ ಹೊರಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಗಸ್ಟ್ 10 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಈ ಆದೇಶ ನೀಡಿದೆ. ಇವುಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪಾನ್ ಮಸಾಲಾದಲ್ಲಿ ನಿಷೇಧಿತ ನಶೆ ಪದಾರ್ಥಗಳನ್ನು ಬೆರೆಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ನಿಕೋಟಿನ್ ಯುಕ್ತ ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದರೂ, ಗುಟ್ಖಾ ಕಂಪನಿಗಳು ತಂಬಾಕು ಮತ್ತು ಪಾನ್ ಮಸಾಲಾವನ್ನು ಪ್ರತ್ಯೇಕ ಸ್ಯಾಶೆಗಳಲ್ಲಿ ನೀಡಿ ಅಡ್ಡದಾರಿಯಲ್ಲಿ ಮಾರಾಟ ಮಾಡುತ್ತಿದ್ದವು. ಗ್ರಾಹಕರು ಇವುಗಳನ್ನು ತಾವೇ ಮಿಶ್ರಣ ಮಾಡಿ ಬಳಸುತ್ತಿದ್ದರು. ಪ್ರಸ್ತುತ ಹೊಸ ನಿಯಮದ ಪ್ರಕಾರ, ಇಂತಹ ಪ್ರತ್ಯೇಕ ಪ್ಯಾಕೆಟ್‌ಗಳ ಜಂಟಿ ಮಾರಾಟ ಹಾಗೂ ಪೊಟ್ಟಣ ಮಾಡದ ಬಿಡಿ ಉತ್ಪನ್ನಗಳ ಮಾರಾಟವನ್ನೂ ಕಾಯ್ದೆಯಡಿ ನಿಷೇಧಿಸಲಾಗಿದೆ. ಯಾವುದೇ ರೂಪದಲ್ಲೂ ಇವುಗಳನ್ನು ಸಂಗ್ರಹಿಸಿಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಕ್ರಮ ಪತ್ತೆಗಾಗಿ ಇಲಾಖೆಯು ರಾಜ್ಯಾದ್ಯಂತ ವಿಶೇಷ ತಪಾಸಣಾ ಅಭಿಯಾನಕ್ಕೆ ಸಜ್ಜಾಗಿದೆ.
ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಮಾರುಕಟ್ಟೆಗೆ ದೊಡ್ಡ ಆಘಾತ ಎದುರಾಗಿದೆ. ಗುಟ್ಖಾ ತಯಾರಿಕೆಯಲ್ಲಿ ಅಡಕೆಯನ್ನು ಪ್ರಮುಖ ಕಚ್ಚಾವಸ್ತುವಾಗಿ ಬಳಸುವುದರಿಂದ, ಈ ನಿಷೇಧವು ಅಡಿಕೆ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ವಿಶೇಷವಾಗಿ ಗುಟ್ಖಾಗೆ ಬಳಸಲಾಗುವ 'ಕೆಂಪಡಿಕೆ' ಬೆಲೆಯಲ್ಲಿ ಭಾರಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ. ಆದರೆ, ರಾಜ್ಯದ 'ಚಾಲಿ' ಅಥವಾ ಬಿಳಿ ಅಡಿಕೆ ಹೆಚ್ಚಾಗಿ ಉತ್ತರ ಭಾರತಕ್ಕೆ ರಫ್ತಾಗುವುದರಿಂದ ಅದರ ಮೇಲೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 86 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 80 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಮತ್ತು ಲಕ್ಷಾಂತರ ಉಪ ಕಾರ್ಮಿಕರು ಈ ಉದ್ಯಮವನ್ನು ನೆಚ್ಚಿಕೊಂಡಿದ್ದಾರೆ. ಇಡೀ ಜಿಲ್ಲೆಯ ಆರ್ಥಿಕತೆಯು ಅಡಿಕೆ ವಹಿವಾಟಿನ ಮೇಲೆಯೇ ನಿಂತಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಸೇರಿದಂತೆ ವಿವಿಧ ಅಡಿಕೆ ಸಹಕಾರ ಸಂಘಗಳು ಸರ್ಕಾರಕ್ಕೆ ಮನವಿ ಮಾಡಿವೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು ಕೇವಲ ನಿಷೇಧಿತ ತಂಬಾಕು ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕು. ಕಾನೂನುಬದ್ಧವಾಗಿ ನಡೆಯುವ ಅಡಿಕೆ ಬೆಳೆ, ಸಂಗ್ರಹಣೆ, ಸಂಸ್ಕರಣೆ ಮತ್ತು ವ್ಯಾಪಾರಕ್ಕೆ ಯಾವುದೇ ಪರೋಕ್ಷ ತೊಂದರೆ ಅಥವಾ ನಿರ್ಬಂಧಗಳನ್ನು ಉಂಟುಮಾಡಬಾರದು ಎಂದು ಒತ್ತಾಯಿಸಲಾಗಿದೆ. ಮಾರುಕಟ್ಟೆ ಬಿಕ್ಕಟ್ಟು ಹಾಗೂ ರೈತರ ಹಿತರಕ್ಷಣೆಯ ಕುರಿತು ಚರ್ಚಿಸಲು ಅಡಿಕೆ ಮಹಾ ಮಂಡಳವು ತುರ್ತು ಸಭೆ ಕರೆದಿದೆ.
Topics

